Tuesday, December 23, 2025

ಅಭಿಮಾನಿಗಳಿಗೆ ಡಬಲ್ ಖುಷಿ: ವಿಜಯ ಹಝಾರೆ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಕಂಬ್ಯಾಕ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ವರ್ಷಾಂತ್ಯದಲ್ಲಿ ವಿಶೇಷ ಸುದ್ದಿಯೊಂದು ಸಿಕ್ಕಿದೆ. ಡಿಸೆಂಬರ್ 24ರಿಂದ ಆರಂಭವಾಗಲಿರುವ ವಿಜಯ ಹಝಾರೆ ಏಕದಿನ ಟೂರ್ನಿಯಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ. 32 ತಂಡಗಳು ಭಾಗವಹಿಸುವ ಈ ದೇಶೀಯ ಟೂರ್ನಿ, ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುನ್ನ ಭಾರತೀಯ ಆಟಗಾರರಿಗೆ ಮಹತ್ವದ ಅಭ್ಯಾಸ ವೇದಿಕೆಯಾಗಿ ಪರಿಣಮಿಸಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಟೀಮ್ ಇಂಡಿಯಾದ ಮುಂದಿನ ಅಂತಾರಾಷ್ಟ್ರೀಯ ಸರಣಿ ಜನವರಿ 11ರಿಂದ ಆರಂಭವಾಗಲಿದೆ. ಅದಕ್ಕೂ ಮೊದಲು ವಿರಾಟ್ ಕೊಹ್ಲಿಯನ್ನು ದೇಶೀಯ ಅಂಗಳದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಲಭ್ಯವಾಗಿದ್ದು, ಅದು ಕೂಡ ಬೆಂಗಳೂರಿನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲೇ ಎಂಬುದು ವಿಶೇಷ. ಐಪಿಎಲ್‌ಗೆ ಮುನ್ನವೇ ಕಿಂಗ್ ಕೊಹ್ಲಿ ಬೆಂಗಳೂರಿನಲ್ಲಿ ಬ್ಯಾಟ್ ಬೀಸಲಿದ್ದಾರೆ.

ಬೆಂಗಳೂರಿನಲ್ಲಿ ನಡೆಯಲಿರುವ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ದೆಹಲಿ ಮತ್ತು ಆಂಧ್ರ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಪಂದ್ಯಕ್ಕಾಗಿ ಕೊಹ್ಲಿ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ವಿರಾಟ್ ಕೊಹ್ಲಿ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿಯಲ್ಲಿ ಆಡಿದ್ದು 2010ರಲ್ಲಿ. ಅಂದು ದೆಹಲಿ ಪರ ಐದು ಪಂದ್ಯಗಳಲ್ಲಿ 229 ರನ್ ಗಳಿಸಿದ್ದ ಅವರು, ಇದೀಗ 15 ವರ್ಷಗಳ ಬಳಿಕ ಮತ್ತೆ ಅದೇ ತಂಡದ ಪರ ದೇಶೀಯ ಏಕದಿನ ಕ್ರಿಕೆಟ್‌ಗೆ ಮರಳಿದ್ದಾರೆ.

error: Content is protected !!