ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯಕ್ಕೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ಯಾವುದೇ ವಿಶೇಷ ಅನುದಾನವನ್ನು ಬಾಕಿ ಇರಿಸಿಕೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಳ್ಳಾರಿ ಸಂಸದ ಇ.ತುಕಾರಾಮ್ ಕೇಳಿದ ಪ್ರಶ್ನೆಗೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲಿಖಿತ ಉತ್ತರ ನೀಡಿದ್ದರು.
ರಾಜ್ಯಕ್ಕೆ ಆಗಿರುವ ವರಮಾನ ನಷ್ಟಕ್ಕೆ 5,495 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು 15ನೇ ಹಣಕಾಸು ಆಯೋಗವು ಮೊದಲನೇ ವರದಿಯಲ್ಲಿ ಶಿಫಾರಸು ಮಾಡಿತ್ತು. ಬೆಂಗಳೂರು ಹಾಗೂ ಇತರ ಕಡೆಗಳಲ್ಲಿ ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ಹಾಗೂ ಬೆಂಗಳೂರಿನ ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗೆ 3 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಆಯೋಗವು ಎರಡನೇ ವರದಿಯಲ್ಲಿ ತಿಳಿಸಿತ್ತು.
ರಾಜ್ಯಕ್ಕೆ ಒಟ್ಟು 11,495 ಕೋಟಿ ರೂ. ವಿಶೇಷ ಅನುದಾನ ಬಾಕಿ ಇದೆ ಎಂದು ರಾಜ್ಯ ಸರ್ಕಾರವು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಹಲವು ಸಲ ಪತ್ರ ಬರೆದಿತ್ತು ಹಾಗೂ ಮನವಿ ಸಲ್ಲಿಸಿತ್ತು.

