Tuesday, December 23, 2025

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಬ್ರೇಕ್‌: ಬೆಂಗಳೂರು ಪೊಲೀಸರಿಂದ ಅನುಮತಿ ನಿರಾಕರಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸಿದ್ದ ವಿಜಯ್ ಹಜಾರೆ ಟ್ರೋಫಿಯ ಪಂದ್ಯಕ್ಕೆ ಅನಿರೀಕ್ಷಿತ ಅಡ್ಡಿ ಎದುರಾಗಿದೆ. ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಬೇಕಿದ್ದ ದೆಹಲಿ ಹಾಗೂ ಆಂಧ್ರಪ್ರದೇಶ ನಡುವಿನ ಪಂದ್ಯಕ್ಕೆ ಬೆಂಗಳೂರು ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ.

ಪಂದ್ಯ ಆಯೋಜನೆಗೆ ಸಂಬಂಧಿಸಿ ಸೋಮವಾರ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕ್ರೀಡಾಂಗಣವನ್ನು ಪರಿಶೀಲಿಸಿದ್ದರು. ಭದ್ರತಾ ವ್ಯವಸ್ಥೆ, ಪ್ರವೇಶ ದ್ವಾರಗಳ ಸ್ಥಿತಿ ಹಾಗೂ ತುರ್ತು ಪರಿಸ್ಥಿತಿಗಳಿಗೆ ಸಿದ್ಧತೆ ಕುರಿತು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಲಾಗಿತ್ತು. ಈ ವರದಿಯ ಆಧಾರದಲ್ಲಿ ಪೊಲೀಸರು ಅಂತಿಮ ತೀರ್ಮಾನ ಕೈಗೊಂಡಿದ್ದಾರೆ.

ನಾಳೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೆಹಲಿ ತಂಡದ ಪರ ಆಡಬಹುದಾದ ಕಾರಣ, ಕ್ರೀಡಾಂಗಣದ ಹೊರಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಬಹುದೆಂಬ ಆತಂಕ ವ್ಯಕ್ತವಾಗಿದೆ. ಹಿಂದೆ RCB ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತದ ಅನುಭವವನ್ನು ಗಮನದಲ್ಲಿಟ್ಟುಕೊಂಡು, ಜನಸಂದಣಿ ನಿಯಂತ್ರಣ ಕಷ್ಟಕರವಾಗಬಹುದು ಎಂದು ಪೊಲೀಸರು ಹೇಳಿದ್ದಾರೆ. ಪ್ರವೇಶ ದ್ವಾರಗಳ ಅಗಲೀಕರಣ ಹಾಗೂ ಜನರು ಸುಗಮವಾಗಿ ಓಡಾಡಲು ಬೇಕಾದ ವ್ಯವಸ್ಥೆಗಳ ಕೊರತೆಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರೇಕ್ಷಕರಿಲ್ಲದೇ ಪಂದ್ಯ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮನವಿ ಮಾಡಿದ್ದರೂ, ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಕಳೆದ ಜೂನ್‌ನ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆ ಕುರಿತ ಎಚ್ಚರಿಕೆ ಇನ್ನಷ್ಟು ಗಂಭೀರವಾಗಿದೆ.

error: Content is protected !!