ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತೊಮ್ಮೆ ಪತ್ರ ಬರೆದಿದ್ದು, ‘ವೋಟ್ ಚೋರಿ’ ಅಭಿಯಾನ ಸಂಬಂಧ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಈ ವಿಚಾರವಾಗಿ ನೇರವಾಗಿ ಚರ್ಚಿಸಲು ಭೇಟಿಗೆ ಸಮಯ ನೀಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ನಾಲ್ಕು ಪತ್ರಗಳನ್ನು ರಾಹುಲ್ ಗಾಂಧಿಗೆ ರವಾನಿಸಿರುವ ರಾಜಣ್ಣ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಪಕ್ಷಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸ್ಥಾನದಿಂದ ದೂರ ಮಾಡಿದರೆ ಪಕ್ಷದ ಮೇಲೆ ಉಂಟಾಗುವ ಪರಿಣಾಮಗಳನ್ನೂ ಹಿಂದಿನ ಪತ್ರಗಳಲ್ಲಿ ಉಲ್ಲೇಖಿಸಿದ್ದರು.
ಇತ್ತೀಚಿನ ಪತ್ರದಲ್ಲಿ ತಮ್ಮ ರಾಜಕೀಯ ಹಿನ್ನೆಲೆ ವಿವರಿಸಿರುವ ರಾಜಣ್ಣ, ತಾವು ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದ ಶಾಸಕರಾಗಿದ್ದು, ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸೇವೆ ಸಲ್ಲಿಸಿದ್ದುದನ್ನು ನೆನಪಿಸಿದ್ದಾರೆ. ಸಚಿವ ಸಂಪುಟದಿಂದ ಹೊರಗಿಟ್ಟ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ವಿಷಯಗಳನ್ನು ಗಮನಕ್ಕೆ ತರುತ್ತಿರುವುದಾಗಿ ಹೇಳಿದ್ದಾರೆ.
‘ವೋಟ್ ಚೋರಿ’ ಅಭಿಯಾನವನ್ನು ತಾವು ಸಂಪೂರ್ಣ ಬೆಂಬಲಿಸಿದ್ದಾಗಿ ಹೇಳಿರುವ ರಾಜಣ್ಣ, ಕೆಪಿಸಿಸಿ ನೇಮಕ ಮಾಡಿದ ಬಿಎಲ್ಏಗಳು ತಮ್ಮ ಹೊಣೆಗಾರಿಕೆ ಸಮರ್ಪಕವಾಗಿ ನಿಭಾಯಿಸದಿರುವುದೇ ತಮ್ಮ ಹೇಳಿಕೆಯ ಅರ್ಥವಾಗಿತ್ತು ಎಂದು ತಿಳಿಸಿದ್ದಾರೆ.
ಈ ಲೋಪಗಳು ಸರಿಪಡಿಸಿದ್ದರೆ ಕರ್ನಾಟಕದಲ್ಲಿ ಇನ್ನಷ್ಟು ಸ್ಥಾನಗಳನ್ನು ಗೆಲ್ಲಬಹುದಾಗಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತುಗಳನ್ನು ತಪ್ಪಾಗಿ ಪ್ರಸ್ತುತಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುವ ಅವರು, ಈ ಎಲ್ಲ ವಿಷಯಗಳ ಕುರಿತು ನೇರ ಸಂಭಾಷಣೆಗೆ ಅವಕಾಶ ನೀಡುವಂತೆ ರಾಹುಲ್ ಗಾಂಧಿಗೆ ವಿನಂತಿಸಿದ್ದಾರೆ.

