ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿದೇಶ ಪ್ರವಾಸದಲ್ಲಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ನೀಡಿದ್ದ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ಪ್ರತಿ ವರ್ಷವೂ ರಾಹುಲ್ ಗಾಂಧಿ ವಿದೇಶಗಳಿಗೆ ಪ್ರವಾಸ ಹೋದಾಗ ಭಾರತದ ಬಗ್ಗೆ ಒಂದಲ್ಲಾ ಒಂದು ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ರಾಹುಲ್ ಮತ್ತು ಕಾಂಗ್ರೆಸ್ ಭಾರತೀಯ ಪ್ರಜಾಪ್ರಭುತ್ವದಲ್ಲಿ ಅವ್ಯಸವ್ಥೆ ಮತ್ತು ಅಶಾಂತಿಯನ್ನು ಬಯಸುತ್ತಿವೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ.
ರಾಹುಲ್ ಗಾಂಧಿ ಹಾಗೂ ಜಾರ್ಜ್ ಸೊರೊಸ್ ಭಾರತೀಯ ಪ್ರಜಾಪ್ರಭುತ್ವದಲ್ಲಿ ಅವ್ಯವಸ್ಥೆ ಉಂಟು ಮಾಡಲು ಭಾರತ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ವಿದೇಶಕ್ಕೆ ಹೋಗುತ್ತಾರೆ. ಕಾಂಗ್ರೆಸ್ ಭಾರತೀಯ ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತದೆ, ಕಾಂಗ್ರೆಸ್ ಭಾರತದ ಪ್ರಗತಿಯನ್ನು ದ್ವೇಷಿಸುತ್ತದೆ, ರಾಹುಲ್ ಗಾಂಧಿಯವರ ಕಾಂಗ್ರೆಸ್ ಅರಾಜಕತೆಯನ್ನು ಬಯಸುತ್ತದೆ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿ, ಅವರು ದೇಶದ ವಿರುದ್ಧ ಮಾತನಾಡಲು ವಿದೇಶಕ್ಕೆ ಹೋಗುತ್ತಾರೆ ಎಂದು ಆರೋಪಿಸಿದರು.ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಲ್ಲ, ಬದಲಾಗಿ ವಿದೇಶಕ್ಕೆ ಹೋಗಿ ರಾಷ್ಟ್ರದ ವಿರುದ್ಧ ಮಾತನಾಡುವ ಭಾರತ ವಿರೋಧಿ ನಾಯಕ. ಹೀಗೆ ಮಾಡುವುದರಿಂದ ಅವರು ಏನನ್ನು ಗಳಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ದೇಶದ ಸಾಂಸ್ಥಿಕ ರಚನೆಗಳನ್ನು ಬಿಜೆಪಿ ತನ್ನ ವಶಕ್ಕೆ ತೆಗೆದುಕೊಂಡಿದೆ ಮತ್ತು ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

