ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಮೇಲೆ ಭಾರತದಿಂದ ಯಾವುದೇ ದಾಳಿ ನಡೆದರೆ ಪಾಕಿಸ್ತಾನದ ಸೈನ್ಯ ಮತ್ತು ಕ್ಷಿಪಣಿಗಳು ಅದಕ್ಕೆ ಪ್ರತಿಕ್ರಿಯಿಸುತ್ತವೆ ಎಂದು ಪಾಕ್ ಪ್ರಧಾನಿ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್)ನ ಯುವ ವಿಭಾಗದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ವಿಡಿಯೋ ಹೇಳಿಕೆ ನೀಡಿರುವ ಪಾಕಿಸ್ತಾನದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ, ಬಾಂಗ್ಲಾದೇಶವನ್ನು ಭಾರತದ ಸೈದ್ಧಾಂತಿಕ ಪ್ರಾಬಲ್ಯಕ್ಕೆ ತಳ್ಳುವುದನ್ನು ಪಾಕಿಸ್ತಾನ ಒಪ್ಪುವುದಿಲ್ಲ. ಒಂದು ವೇಳೆ ಭಾರತ ಬಾಂಗ್ಲಾದೇಶದ ಮೇಲೆ ದಾಳಿ ಮಾಡಿದರೆ ಅಥವಾ ಅದರ ಸ್ವಾಯತ್ತತೆಯ ಮೇಲೆ ದುಷ್ಟ ದೃಷ್ಟಿ ಬೀರಿದರೆ, ಪಾಕಿಸ್ತಾನ ಅದಕ್ಕೆ ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಎಚ್ಚರಿಸಿದ್ದಾರೆ.
‘ಭಾರತವು ಬಾಂಗ್ಲಾದೇಶದ ಸ್ವಾಯತ್ತತೆಯ ಮೇಲೆ ದಾಳಿ ಮಾಡಿದರೆ, ಯಾರಾದರೂ ಬಾಂಗ್ಲಾದೇಶವನ್ನು ಕೆಟ್ಟ ಉದ್ದೇಶದಿಂದ ನೋಡಲು ಧೈರ್ಯ ಮಾಡಿದರೆ ಪಾಕಿಸ್ತಾನದ ಜನರು, ಪಾಕಿಸ್ತಾನಿ ಸಶಸ್ತ್ರ ಪಡೆಗಳು ಮತ್ತು ನಮ್ಮ ಕ್ಷಿಪಣಿಗಳು ಸುಮ್ಮನಿರುವುದಿಲ್ಲ, ನಾವು ಬಾಂಗ್ಲಾದೇಶದ ಸಹಾಯಕ್ಕೆ ರೆಡಿ ಇರುತ್ತೇವೆ ಎಂಬುದನ್ನು ನೆನಪಿಡಿ’ ಎಂದು ಅವರು ಹೇಳಿದ್ದಾರೆ.
ಈ ವೇಳೆ ಉಸ್ಮಾನಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ಔಪಚಾರಿಕ ಮಿಲಿಟರಿ ಮೈತ್ರಿಗೆ ಕರೆ ನೀಡುವ ಮೂಲಕ ಪಾಕಿಸ್ತಾನದ ಜೊತೆ ಕೈಜೋಡಿಸಲು ಬಾಂಗ್ಲಾದೇಶವನ್ನು ಆಹ್ವಾನಿಸಿದ್ದಾರೆ.
ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಬಾಂಗ್ಲಾದೇಶಕ್ಕೆ ಕಾಟ ನೀಡುತ್ತಿದೆ. ಹಿಂದು ರಾಷ್ಟ್ರವನ್ನು ಸ್ಥಾಪಿಸಲು ಭಾರತವು ಅಖಂಡ ಭಾರತ ಸಿದ್ಧಾಂತದ ಅಡಿಯಲ್ಲಿ ಬಾಂಗ್ಲಾದೇಶವನ್ನು ಕೆಡವಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಪ್ರಸ್ತಾಪವೆಂದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಿಲಿಟರಿ ಮೈತ್ರಿಯನ್ನು ರಚಿಸಬೇಕು. ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಬೇಕು ಮತ್ತು ಬಾಂಗ್ಲಾದೇಶ ಪಾಕಿಸ್ತಾನದಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಬೇಕು. ಪಾಕಿಸ್ತಾನ-ಬಾಂಗ್ಲಾದೇಶ ಮಿಲಿಟರಿ ಪಾಲುದಾರಿಕೆಯು ಪ್ರಾದೇಶಿಕ ಶಕ್ತಿಯ ಚಲನಶೀಲತೆಯನ್ನು ಬದಲಾಯಿಸುತ್ತದೆ ಮತ್ತು ಜಾಗತಿಕವಾಗಿ ಎರಡೂ ದೇಶಗಳು ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಬಾಂಗ್ಲಾದೇಶ ಪಾಕಿಸ್ತಾನದ ಈ ಆಫರ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

