ಹೊಸ ದಿಗಂತ ವರದಿ, ಮಡಿಕೇರಿ:
ಭಾರತೀಯ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಬಾಂಗ್ಲಾದೇಶದ ಆಟಗಾರರ ಭಾಗವಹಿಸುವಿಕೆಯನ್ನು ನಿರ್ಬಂಧಿಸುವಂತೆ ರಾಷ್ಟ್ರೀಯ ನೀತಿ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವಂತೆ ಮಾಜಿ ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಗಮನಸೆಳೆದಿದ್ದಾರೆ.
ಈ ಸಂಬಂಧ ಪ್ರಧಾನಿಯವರಿಗೆ ಪತ್ರ ಬರೆದಿರುವ ಅಪ್ಪಚ್ಚುರಂಜನ್ ಅವರು, ಇತ್ತೀಚಿನ ಅಂತರರಾಷ್ಟ್ರೀಯ ಬೆಳವಣಿಗೆಗಳು, ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತರುವ ಘಟನೆಗಳು, ಆಂತರಿಕ ಭದ್ರತಾ ಸಂವೇದನಾಶೀಲತೆಗಳು ಹಾಗೂ ಭಾರತೀಯ ನಾಗರಿಕರ ಮನೋಭಾವಗಳನ್ನು ಪರಿಗಣಿಸಿ, ಐಪಿಎಲ್‌ನಂತಹ ಪ್ರಮುಖ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿದೇಶಿ ಆಟಗಾರರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಪ್ರಸ್ತುತ ನೀತಿಗಳನ್ನು ಸರ್ಕಾರವು ಪರಿಶೀಲಿಸಿ, ಐಪಿಎಲ್‌ನಲ್ಲಿ ಬಾಂಗ್ಲಾದೇಶ ಆಟಗಾರರನ್ನು ಒಳಪಡಿಸದಂತೆ ನೀತಿ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ, ಆಂತರಿಕ ಭದ್ರತಾ ಪರಿಗಣನೆಗಳು ಹಾಗೂ ಸಾರ್ವಜನಿಕ ಸಾಮರಸ್ಯದ ಆಧಾರದ ಮೇಲೆ ಕೈಗೊಳ್ಳುವ ಇಂತಹ ನಿರ್ಧಾರಗಳು ನಾಗರಿಕರಲ್ಲಿ ವಿಶ್ವಾಸವನ್ನು ಮೂಡಿಸಿ, ಭಾರತೀಯ ಕ್ರೀಡೆಯ ಗೌರವ ಹಾಗೂ ಅಖಂಡತೆಯನ್ನು ಕಾಪಾಡುತ್ತದೆ ಎಂದಿರುವ ಅಪ್ಪಚ್ಚುರಂಜನ್, ಈ ವಿಷಯದಲ್ಲಿ ಸ್ಪಷ್ಟ ಮಾರ್ಗಸೂಚಿಗಳು ಮತ್ತು ಪಾರದರ್ಶಕ ಸಂವಹನವನ್ನು ನೀಡಬೇಕೆಂದು ಮೋದಿಯವರನ್ನು ಕೋರಿದ್ದಾರೆ.
ಭಾರತದ ಏಕತೆ, ಭದ್ರತೆ ಮತ್ತು ಮೌಲ್ಯಗಳನ್ನು ರಕ್ಷಿಸುವಲ್ಲಿ ನಿಮ್ಮ ನಾಯಕತ್ವ ಮತ್ತು ವಿವೇಕದ ಮೇಲೆ ತನಗೆ ಸಂಪೂರ್ಣ ನಂಬಿಕೆ ಇರುವುದಾಗಿಯೂ ಅವರು ತಿಳಿಸಿದ್ದಾರೆ.

