Wednesday, December 24, 2025

ತಮ್ಮಣ್ಣ ಶೆಟ್ಟಿ ವಿರುದ್ಧ ಕೊಂಡಾಣ ಕ್ಷೇತ್ರದ ಚಿನ್ನ ಕದ್ದ ಆರೋಪ: ತಪ್ಪು ಕಾಣಿಕೆ ಹಾಕಿ ದೈವದೆದುರು ಕ್ಷಮೆ ಕೋರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಚಲನಚಿತ್ರ ಖ್ಯಾತಿಯ ರಿಷಬ್ ಶೆಟ್ಟಿ, ವಾರಾಹಿ ಪಂಜುರ್ಲಿಗೆ ನೀಡಿದ್ದ ಹರಕೆ ನೇಮೋತ್ಸವದ ಕುರಿತಂತೆ ಉಂಟಾದ ವಿವಾದದ ಸಂದರ್ಭ ದೈವಾರಾಧನೆಯ ಚಿಂತಕ ತಮ್ಮಣ್ಣ ಶೆಟ್ಟಿ ಅವರು ಕೋಟೆಕಾರು ಗ್ರಾಮದ ಕಾರಣೀಕ ಕ್ಷೇತ್ರ ಕೊಂಡಾಣದ ದೈವದ ಬಂಗಾರ ಕದ್ದಿರುವ ಬಗ್ಗೆ ವೈಯಕ್ತಿಕ ಆರೋಪ ಮಾಡಿದ್ದ ಕದ್ರಿ ಬಾರೆಬೈಲು ದೈವಸ್ಥಾನದ ಆಡಳಿತ ಕಮಿಟಿಯ ಗೌರವಾಧ್ಯಕ್ಷ ರವಿ ಪ್ರಸನ್ನ, ಕೊಂಡಾಣ ಕ್ಷೇತ್ರಕ್ಕೆ ತಮ್ಮ ಬೆಂಬಲಿಗರೊಂದಿಗೆ ಮಂಗಳವಾರ ಭೇಟಿ ನೀಡಿ ದೈವಗಳೆದುರು ಕ್ಷಮೆ ಯಾಚಿಸಿ ತಪ್ಪು ಕಾಣಿಕೆ ಹಾಕಿದ್ದಾರೆ.

ಈ ವೇಳೆ ಕುಡ್ಲ ರಾಂಪೇಜ್ ಯೂ ಟ್ಯೂಬ್ ವಾಹಿನಿಯ ಅಜಯ್ ಅಂಚನ್ ಎಂಬವರ ಮೇಲೆ ತಂಡ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ನಟ ರಿಷಬ್ ಶೆಟ್ಟಿ ವಾರಾಹಿ ಪಂಜುರ್ಲಿಗೆ ಸಲ್ಲಿಸಿದ್ದ ಹರಕೆ ನೇಮ ಮತ್ತು ನೇಮದಲ್ಲಿ ದೈವ ನರ್ತಕ ಅತಿರೇಕವಾಗಿ ವರ್ತಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಕೇಳಿಬಂದು ವಿವಾದ ರೂಪ ಪಡೆದ ಬೆನ್ನಿಗೇ ಸ್ವತಃ ಕದ್ರಿ ಬಾರೆಬೈಲಿನ ಜಾರಂದಾಯ, ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನದ ಆಡಳಿತ ಕಮಿಟಿಯ ಗೌರವಾಧ್ಯಕ್ಷ ರವಿ ಪ್ರಸನ್ನ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಹರಕೆ ನೇಮ ಆಗಿರುವ ಬಗ್ಗೆ ನಮಗೆ ಯಾವುದೇ ರೀತಿಯ ಸಂಶಯಗಳಿಲ್ಲ. ದೈವ ನರ್ತನ ಬಗ್ಗೆಯೂ ಆಕ್ಷೇಪ ಇಲ್ಲವೆಂದು ಸಮರ್ಥಿಸಿಕೊಂಡಿದ್ದಲ್ಲದೆ, ವಿವಾದ ಎಬ್ಬಿಸಲು ಕಾರಣರಾಗಿದ್ದಾರೆಂದು ದೈವಾರಾಧಕ ತಮ್ಮಣ್ಣ ಶೆಟ್ಟಿ ವಿರುದ್ಧ ತೀರಾ ವೈಯಕ್ತಿಕವಾಗಿ ಆರೋಪ ಮಾಡಿ ತಮ್ಮಣ್ಣ ಶೆಟ್ಟಿ ಎಲ್ಲಿ ಏನು ಮಾಡಿದ್ದಾರೆಂದು ಗೊತ್ತಿದೆ. ಕೊಂಡಾಣ ಮತ್ತು ಷಣ್ಮುಖ ದೇವಸ್ಥಾನದಲ್ಲಿ ದೇವರ ಬಂಗಾರವನ್ನು ತೆಗೆದು ಅಡವಿಟ್ಟದ್ದು ದೈವಾರಾಧನೆಗೆ ಅಪಚಾರ ಆಗುವುದಿಲ್ಲವೇ ಎಂದು ಟೀಕಿಸಿದ್ದರು.


ಇದಕ್ಕೆ ಪ್ರತಿಯಾಗಿ ಪತ್ರಿಕಾಗೋಷ್ಠಿ ನಡೆಸಿದ್ದ ತಮ್ಮಣ್ಣ ಶೆಟ್ಟಿ, ರವಿ ಪ್ರಸನ್ನ ತನ್ನ ಮೇಲಿನ ಕಳ್ಳತನದ ಆರೋಪ ಸಾಬೀತು ಪಡಿಸಲಿ ಎಂದು ಬಹಿರಂಗ ಸವಾಲು ಎಸೆದಿದ್ದರು.

ಈ ಎಲ್ಲಾ ವಿದ್ಯಮಾನಗಳ ನಡುವೆ ರವಿ ಪ್ರಸನ್ನ ಅವರು ಮಂಗಳವಾರದಂದು ಕೊಂಡಾಣ ಕ್ಷೇತ್ರಕ್ಕೆ ಬಂದು ದೈವದೆದುರು ತಪ್ಪು ಕಾಣಿಕೆ ಹಾಕಿದ್ದಾರೆ.

ಈ ವೇಳೆ ಕ್ಷೇತ್ರದ ಅಂಗಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿ ಪ್ರಸನ್ನ, ಕೊಂಡಾಣ ಕ್ಷೇತ್ರದ ನೀಲೇಶ್ವರ ಪದ್ಮನಾಭ ತಂತ್ರಿ ಮತ್ತು ಆಡಳಿತ ಮಂಡಳಿಯವರು ಕರೆದದ್ದಕ್ಕೆ ಇಲ್ಲಿ ಬಂದಿರುವೆ. ಆಡಿದ ಎಲ್ಲಾ ಮಾತುಗಳನ್ನೂ ಹಿಂಪಡೆದಿರುವೆ ಎಂದು ತಮ್ಮಣ್ಣ ಶೆಟ್ರೆ ಹೇಳಿದ್ದರಿಂದ ನಾನೂ ಕೂಡ ಆಡಿದ ಮಾತುಗಳನ್ನ ಹಿಂಪಡೆದಿದ್ದೇನೆ. ವಿವಾದದಲ್ಲಿ ಕೊಂಡಾಣ ಕ್ಷೇತ್ರದ ಹೆಸರು ತೆಗೆದಿದ್ದಕ್ಕೆ ತಪ್ಪು ಕಾಣಿಕೆ ಹಾಕಿ ದೈವದಲ್ಲಿ ಕ್ಷಮೆ ಕೇಳಿರುವುದಾಗಿ ಹೇಳಿದರು.

ತಮ್ಮಣ್ಣ ಶೆಟ್ಟಿ ಮಾತನಾಡಿ, ದೈವಾರಾಧನೆಗೆ ಚ್ಯುತಿ ಬಂದಾಗ ನಾವು ಧ್ವನಿ ಎತ್ತುತ್ತಾ ಬಂದಿದ್ದೇವೆ.ಯಾರ ಮನಸ್ಸಿಗೂ ನೋವು ನೀಡುವುದಾಗಲಿ ಅಥವಾ ಯಾರಲ್ಲೂ ಸಂಘರ್ಷಕ್ಕಿಳಿಯುವ ಉದ್ದೇಶ ನಮ್ಮದಲ್ಲ. ರಿಷಬ್ ಶೆಟ್ಟಿ ನೀಡಿದ್ದ ಹರಕೆ ನೇಮದ ಲೋಪ, ದೋಷದ ಬಗ್ಗೆ ಧ್ವನಿ ಎತ್ತಿದ್ದೆ. ರವಿ ಪ್ರಸನ್ನ ಅವರು ಅದನ್ನ ವಿರೋಧಿಸುವ ಭರಾಟೆಯಲ್ಲಿ ಷಣ್ಮುಗ ದೇವಸ್ಥಾನ ಮತ್ತು ಕೊಂಡಾಣ ಕ್ಷೇತ್ರದಲ್ಲಿ ಬಂಗಾರ ಕಳವಾಗಿರುವ ಬಗ್ಗೆ ನನ್ನ ಹೆಸರನ್ನ ಥಳುಕು ಹಾಕಿ ಆರೋಪ ಮಾಡಿದ್ದರು. ಜಾಲತಾಣಗಳಲ್ಲೂ ತಮ್ಮಣ್ಣ ಶೆಟ್ಟಿ ದೈವದ ಚಿನ್ನ ಕದ್ದಿರುವ ಬಗ್ಗೆ ಎಡಿಟ್ ಮಾಡಿ ತೇಜೋವಧೆ ಮಾಡಲಾಗಿದೆ. ಇದೀಗ ರವಿ ಪ್ರಸನ್ನ ಅವರು ಕೊಂಡಾಣದ ಕಲೆ ಕಾರಣೀಕ ತಿಳಿದು ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆ ಹಾಕಿ ದೈವದಲ್ಲಿ ಕ್ಷಮೆ ಯಾಚಿಸಿದ್ದಾರೆ. ದೈವದ ಕಳದಲ್ಲಿ ಆಗುವ ತೀರ್ಮಾನದೆದುರು ನಾವೇ ದೊಡ್ಡವರೆಂದು ಮುಂದುವರಿಯಲು ಸಾಧ್ಯವಿಲ್ಲವೆಂದರು. ಎಲ್ಲಾ ದೈವ ಕ್ಷೇತ್ರಗಳಲ್ಲೂ ಪ್ರಚಾರದ ನಿಟ್ಟಿನಲ್ಲಿ ವೀಡಿಯೋ ಮಾಡುವುದನ್ನ ನಿಲ್ಲಿಸಿ. ಜಾಲತಾಣಗಳಲ್ಲಿ ದೈವಾರಾಧನೆಯ ವೀಡಿಯೋಗಳು ಹರಿದಾಡಿ, ಆಚರಣೆಯಲ್ಲಿ ಚ್ಯುತಿ ಬಂದಾಗ ನಾವು ಮುಂದೆಯೂ ಪ್ರಶ್ನಿಸಿ ಜನಜಾಗೃತಿ ಮೂಡಿಸುತ್ತೇವೆಂದರು.

ಕೊಂಡಾಣ ಪಿಲಿಚಾಮುಂಡಿ, ಬಂಟ, ಮುಂಡತ್ತಾಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರ್ಷರಾಜ್ ಮುದ್ಯ, ಕೊಂಡಾಣ ಕ್ಷೇತ್ರದ ಒಂದನೇ ಗುರಿಕಾರರಾದ ಮುತ್ತಣ್ಣ ಶೆಟ್ಟಿ,ಹಿರಿಯರಾದ ನಾರಾಯಣ ರೈ, ಕದ್ರಿ ಮಂಜುನಾಥ ಕ್ಷೇತ್ರದ ಕೃಷ್ಣ ಕದ್ರಿ, ಉದ್ಯಮಿ ಗಿರಿಧರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!