ಹೊಸ ದಿಗಂತ ಡಿಜಿಟಲ್ ಡೆಸ್ಕ್:
2026ರ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿಸಿದ್ದಕ್ಕೆ ಭಾರತೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತಂಡವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದಾರೆ.
ವಾಸ್ತವವಾಗಿ ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬಾಂಗ್ಲಾದೇಶ ತಂಡದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತನ್ನ ತಂಡಕ್ಕೆ ಖರೀದಿ ಮಾಡಿತ್ತು. ಹೀಗಾಗಿ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯದಿಂದ ಕೆರಳಿರುವ ಭಾರತೀಯರು ಕೆಕೆಆರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ.
ಅಬುಧಾಬಿಯಲ್ಲಿ ನಡೆದ 2026 ರ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಅವರ ಮೂಲ ಬೆಲೆಗಿಂತ ಸುಮಾರು ಐದು ಪಟ್ಟು ಹೆಚ್ಚು ಬೆಲೆಗೆ ಖರೀದಿಸಿತು. 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಮುಸ್ತಾಫಿಜುರ್ ಅವರನ್ನು ಕೆಕೆಆರ್ 9.20 ಕೋಟಿ ನೀಡಿ ಖರೀದಿಸಿತ್ತು.
ಇದೀಗ ಮುಸ್ತಾಫಿಜುರ್ ಖರೀದಿಗೆ ಕೆಕೆಆರ್ ವಿರುದ್ಧ ವಿರೋಧ ವ್ಯಕ್ತವಾಗಿದೆ. ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಮತ್ತು ಹಿಂದುಗಳನ್ನು ಥಳಿಸಲಾಗುತ್ತಿರುವ ದೇಶದಿಂದ ಆಟಗಾರರನ್ನು ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡಲಾಗಿದೆ. ಅಲ್ಲದೆ ಕೆಕೆಆರ್ ಫ್ರಾಂಚೈಸಿ ಅವರನ್ನು ಖರೀದಿಸಿರುವುದಕ್ಕೆ ಭಾರತೀಯರು ಕೆಕೆಆರ್ ಮೇಲೆ ಕೋಪಗೊಂಡಿದ್ದಾರೆ.
ಐಪಿಎಲ್ನಿಂದ ಕೆಕೆಆರ್ ತಂಡವನ್ನು ಬಹಿಷ್ಕರಿಸಬೇಕೆಂಬ ಒತ್ತಾಯ ಜೋರಾಗಿದೆ. ಆದಾಗ್ಯೂ, ಕೆಲವರು ಕೆಕೆಆರ್‌ಗಿಂತ ಬಿಸಿಸಿಐ ಅನ್ನು ದೂಷಿಸುತ್ತಿದ್ದಾರೆ. ಕೆಕೆಆರ್ ಕಡೆಗೆ ಬೆರಳು ತೋರಿಸುವವರನ್ನು ಬಿಸಿಸಿಐ ಅನ್ನು ಪ್ರಶ್ನಿಸುವಂತೆ ಒತ್ತಾಯಿಸುತ್ತಿದ್ದಾರೆ.

