Tuesday, December 23, 2025

ಪ್ರಯಾಣಿಕನಿಗೆ ಮೂಗಿನಲ್ಲಿ ರಕ್ತ ಬರುವಂತೆ ಹಲ್ಲೆ: ಏರ್ ಇಂಡಿಯಾದ ಪೈಲಟ್‌ ವಿರುದ್ಧ ಎಫ್‌ಐಆರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಏರ್ಪೋರ್ಟ್‌ನಲ್ಲಿ ಪ್ರಯಾಣಿಕರೊಬ್ಬರಿಗೆ ಮೂಗಿನಲ್ಲಿ ರಕ್ತ ಬರುವಂತೆ ಹಲ್ಲೆ ಮಾಡಿದ ಏರ್ ಇಂಡಿಯಾದ ಪೈಲಟ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ .

ಪೈಲಟ್‌ ನಡೆಸಿದ ಹಲ್ಲೆಯಿಂದಾಗಿ ಮೂಗಿನ ಮೂಳೆ ಮುರಿದಿದೆ ಎಂದು ಪ್ರಯಾಣಿಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡ ನಂತರ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಪೈಲಟ್‌ ಕ್ಯಾಪ್ಟನ್ ವೀರೇಂದ್ರ ಸೆಜ್ವಾಲ್‌ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಡಿಸೆಂಬರ್ 19ರಂದು ಈ ಘಟನೆ ನಡೆದಿತ್ತು. ಆಫ್ ಡೂಟಿ( ಕೆಲಸ ಅವಧಿಯಲ್ಲಿ ಇಲ್ಲದ) ಪೈಲಟ್‌ ವೀರೇಂದ್ರ ಸೆಜ್ವಾಲ್ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದು, ಈ ವೇಳೆ ಸಹ ಪ್ರಯಾಣಿಕನ ಜೊತೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಅವರ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹಲ್ಲೆಗೊಳಗಾದ ಪ್ರಯಾಣಿಕನನ್ನು ಅಂಕಿತ್ ಎಂದು ಗುರುತಿಸಲಾಗಿದ್ದು, ಹಲ್ಲೆಯ ತೀವ್ರತೆಗೆ ಪ್ರಯಾಣಿಕ ಅಂಕಿತ್ ಅವರ ಮೂಗಿನ ಮೂಳೆ ಹುಡಿಯಾಗಿ ರಕ್ತ ಬಂದಿದೆ. ಸಿಟಿ ಸ್ಕ್ಯಾನ್ ವೇಳೆ ಇದು ಖಚಿತವಾಗಿದೆ.

ವಿಮಾನ ನಿಲ್ದಾಣದಲ್ಲಿ ಕ್ಯೂ ರೂಲ್ಸ್ ಪಾಲಿಸದೇ ಮುಂದೆ ಹೋಗಿದ್ದಕ್ಕೆ ಕ್ಯಾಪ್ಟನ್ ಸೆಜ್ವಾಲ್‌ಗೆ ಅಂಕಿತ್ ಅವರು ಆಕ್ಷೇಪಿಸಿದ ನಂತರ ಈ ಹಲ್ಲೆ ನಡೆದಿದೆ ಎಂದು ಅಂಕಿತ್ ಆರೋಪಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅಂಕಿತ್, ತನ್ನ 7 ವರ್ಷದ ಮಗಳ ಮುಂದೆ ಹಲ್ಲೆ ಮಾಡಲಾಯ್ತು.ಇದು ನನ್ನನ್ನು ಆಘಾತಕ್ಕೀಡು ಮಾಡಿತು. ಅವನು ನನ್ನ ಮಗಳ ಮುoದೆ ನನಗೆ ಥಳಿಸಿದ, ನನ್ನ ರಜಾದಿನಗಳು ಹಾಳಾಯ್ತು. ಅಲ್ಲದೇ ಆ ಪೈಲಟ್ ನನ್ನನ್ನು ಅವಿದ್ಯಾವಂತ ಎಂದು ನಿಂದಿಸಿದ ಎಂದು ಅಂಕಿತ್ ಹೇಳಿದ್ದಾರೆ.

ಘಟನೆಯ ಬಳಿಕ ಈ ಪ್ರಕರಣವನ್ನು ಇಲ್ಲಿಗೆ ಬಿಡುವಂತೆ ಪ್ರಕರಣ ಮುಂದುವರೆಸದಂತೆ ನನ್ನ ಬಳಿ ಪತ್ರ ಬರೆಸಿಕೊಳ್ಳಲಾಯ್ತು ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ದೂರಿದ್ದರು. ಘಟನೆಯ ನಂತರ ನಾಗರಿಕ ವಿಮಾನಯಾನ ಸಚಿವಾಲಯವೂ ತನಿಖೆಗೆ ಆದೇಶಿಸಿದೆ. ಇದಾದ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್, ತನಿಖೆ ಪೂರ್ಣಗೊಂಡು ಫಲಿತಾಂಶ ಹೊರಬರುವವರೆಗೂ ಕ್ಯಾಪ್ಟನ್ ವೀರೇಂದ್ರ ಸೆಜ್ವಾಲ್ ಅವರನ್ನು ಸೇವೆಯಿಂದ ಅಮಾನತು ಮಾಡಿದೆ.

error: Content is protected !!