Tuesday, December 23, 2025

ಅಂಡರ್-19 ಏಷ್ಯಾಕಪ್ | ಭಾರತದ ಆಟಗಾರರ ಮೇಲೆ ಐಸಿಸಿಗೆ ದೂರು ನೀಡಲು ಮುಂದಾದ ಪಾಕ್ ಸಚಿವ ನಖ್ವಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಂಡರ್ 19 ಏಷ್ಯಾಕಪ್ ಫೈನಲ್ ವೇಳೆ ಅನುಚಿತವಾಗಿ ವರ್ತಿಸಿದ್ದಾರೆಂದು ಭಾರತೀಯ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮತ್ತು ಗೃಹ ಸಚಿವ ಮೊಹ್ಸಿನ್ ನಖ್ವಿ ಐಸಿಸಿಗೆ ದೂರು ನೀಡಲಿದ್ದಾರೆ.

ಪಂದ್ಯದ ವೇಳೆ ಭಾರತೀಯ ಆಟಗಾರರ ವರ್ತನೆ ಸಭ್ಯವಾಗಿರಲಿಲ್ಲ ಎಂದು ಪಾಕ್ ತಂಡದ ಕೋಚ್ ಆಗಿದ್ದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನಖ್ವಿ, ಭಾರತೀಯ ಆಟಗಾರರ ಕೆಟ್ಟ ವರ್ತನೆ ವಿರುದ್ಧ ಐಸಿಸಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಭಾರತೀಯ ಆಟಗಾರರ ವಿರುದ್ಧ ಐಸಿಸಿಗೆ ಅಧಿಕೃತವಾಗಿ ದೂರು ನೀಡಲಾಗುವುದು ಮತ್ತು ರಾಜಕೀಯ ಹಾಗೂ ಕ್ರೀಡೆಯನ್ನು ಪ್ರತ್ಯೇಕವಾಗಿ ನೋಡಬೇಕು ಎಂದು ನಖ್ವಿ ಹೇಳಿದರು.

ಅಂಡರ್ 19 ಏಷ್ಯಾಕಪ್ ಫೈನಲ್ ವೇಳೆ ಭಾರತೀಯ ಆಟಗಾರರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ಸರ್ಫರಾಜ್ ಅಹ್ಮದ್ ಪಾಕ್ ಆಟಗಾರರಿಗೆ ಸೂಚನೆ ನೀಡುತ್ತಿರುವ ಆಡಿಯೋ ಕ್ಲಿಪ್‌ಗಳು ಹೊರಬಿದ್ದಿದ್ದವು. ಕಡೆಗಣಿಸುವವರನ್ನು ಮರಳಿ ಕಡೆಗಣಿಸಬೇಡಿ ಮತ್ತು ಆಟದ ಘನತೆಯನ್ನು ಮೀರಿ ವರ್ತಿಸಬೇಡಿ ಎಂದು ಸರ್ಫರಾಜ್ ಪಾಕ್ ಆಟಗಾರರಿಗೆ ಹೇಳುತ್ತಿರುವ ಆಡಿಯೋ ಕ್ಲಿಪ್‌ಗಳು ಬಹಿರಂಗಗೊಂಡಿದ್ದವು. ಇದರ ಸತ್ಯಾಸತ್ಯತೆ ಖಚಿತವಾಗಿಲ್ಲದಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಆಡಿಯೋ ತನ್ನದೇ ಎಂದು ಸರ್ಫರಾಜ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದರು.

ನಾನು ಈ ಹಿಂದೆ ಭಾರತ ತಂಡದ ವಿರುದ್ಧ ಆಡಿದ್ದೇನೆ. ಆದರೆ ಆಗ ಅವರು ಆಟವನ್ನು ಗೌರವಿಸುತ್ತಿದ್ದರು. ಆದರೆ ಈಗ ಹೊರಗಿನಿಂದ ಆಟ ನೋಡಿದಾಗ, ಈ ತಂಡವು ಆಟವನ್ನು ಗೌರವಿಸುತ್ತಿಲ್ಲ ಎಂದು ನನಗೆ ಅನಿಸಿತು. ಮೈದಾನದಲ್ಲಿ ಭಾರತೀಯ ಆಟಗಾರರ ವರ್ತನೆ ಹಲವು ಬಾರಿ ಅನೈತಿಕವಾಗಿತ್ತು. ಮೈದಾನದಲ್ಲಿ ಭಾರತೀಯ ಆಟಗಾರರು ತೋರಿದ ಹಲವು ಭಾವನಾತ್ಮಕ ಪ್ರದರ್ಶನಗಳನ್ನು ನೀವೂ ಟಿವಿಯಲ್ಲಿ ನೋಡಿರಬಹುದು. ಆದರೆ ನಾವು ಆಟದ ಘನತೆಗೆ ತಕ್ಕಂತೆ ಮಾತ್ರ ವಿಜಯವನ್ನು ಆಚರಿಸಿದ್ದೇವೆ ಎಂದು ಸರ್ಫರಾಜ್ ಹೇಳಿದ್ದರು.

error: Content is protected !!