Tuesday, December 23, 2025

20 ವರ್ಷಗಳ ಬಳಿಕ ಒಂದಾದ ಠಾಕ್ರೆ ಸಹೋದರರು: ಬಿಎಂಸಿ ಚುನಾವಣೆಗೆ ಒಗ್ಗಟ್ಟಿನ ಮಂತ್ರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 20 ವರ್ಷಗಳ ನಂತರ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಮುಂದಿನ ವರ್ಷ ಜನವರಿ 15 ರಂದು ನಡೆಯಲಿರುವ ಏಷ್ಯಾದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಚುನಾವಣೆಯಲ್ಲಿ ಒಗ್ಗಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಎಚ್ಚೆತ್ತ ಶಿವಸೇನೆ(ಯುಬಿಟಿ), ಬಿಎಂಸಿ ಮತ್ತು ಇತರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಉದ್ದವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಸಹೋದರರು ಒಂದಾಗಿ ಚುನಾವಣೆ ಎದುರಿಸುವ ಬಗ್ಗೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಮುಂಬೈನಲ್ಲಿ ಅಧಿಕೃತ ಘೋಷಣೆ ಮಾಡಲಾಗುತ್ತಿದೆ.

ಠಾಕ್ರೆ ಸಹೋದರರು ಕೈಜೋಡಿಸುವ ಬಗ್ಗೆ ನಾಳೆ ಮುಂಬೈನ ಹೋಟೆಲ್ ಬ್ಲೂ ಸೀನಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ(ಯುಬಿಟಿ) 150 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಬಿಎಂಸಿಯ ಒಟ್ಟು 227 ರಲ್ಲಿ ಉಳಿದ 77 ಸ್ಥಾನಗಳಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಸ್ಪರ್ಧಿಸಲಿದೆ ಎಂದು ಮೂಲಗಳು ತಿಳಿಸಿವೆ.

‘ಸೀಟು ಹಂಚಿಕೆ ಮಾತುಕತೆಯಲ್ಲಿ, 150 ಕ್ಕೂ ಹೆಚ್ಚು ಸ್ಥಾನಗಳ ಕುರಿತು ಮಾತುಕತೆ ಪೂರ್ಣಗೊಂಡಿವೆ. ಆದರೆ ಸುಮಾರು 70 ಸ್ಥಾನಗಳನ್ನು ಇನ್ನೂ ಇತ್ಯರ್ಥಪಡಿಸಬೇಕಾಗಿದೆ. ಕೆಲವು ಸ್ಥಾನಗಳ ಬಗ್ಗೆ ವಿವಾದವಿತ್ತು, ಹೆಚ್ಚಾಗಿ ಮರಾಠಿ ಪ್ರಾಬಲ್ಯವಿರುವ ದಾದರ್, ಮಾಹಿಮ್ ಮತ್ತು ಪರೇಲ್ ಪ್ರದೇಶಗಳಿಂದ, ಎರಡೂ ಪಕ್ಷಗಳು ಹಕ್ಕು ಮಂಡಿಸಿವೆ. ಆದಾಗ್ಯೂ, ಮುಂದಿನ ಕೆಲವು ದಿನಗಳಲ್ಲಿ ಸೀಟು ಹಂಚಿಕೆ ಸಮಸ್ಯೆ ಪರಿಹರಿಸಲಾಗುವುದು’ ಎಂದು ಉದ್ಧವ್ ಠಾಕ್ರೆ ಅವರ ಆಪ್ತ ಮೂಲಗಳು ತಿಳಿಸಿವೆ.

error: Content is protected !!