ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಲಕ್ನೋ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (ಕೆಜಿಎಂಯು) ಲವ್ ಜಿಹಾದ್ ಮತ್ತು ಮತಾಂತರಕ್ಕೆ ಕಿರುಕುಳ ನೀಡಿದ ಆರೋಪದ ಮೇಲೆ ಅನ್ಯಕೋಮಿನ ವೈದ್ಯನನ್ನು ಸೇವೆಯಿಂದ ಅಮಾನತು ಮಾಡಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶಿಸಿದೆ.
ಡಾ.ರಮೀಜುದ್ದೀನ್ ಮಲಿಕ್ ಸೇವೆಯಿಂದ ಅಮಾನತಾದ ವೈದ್ಯ. ಈತ ತನಗಾದ ಮೊದಲ ಮದುವೆಯನ್ನು ಮರೆಮಾಡಿ ಹಿಂದು ಮಹಿಳಾ ವೈದ್ಯೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದ. ಮಹಿಳೆಯು ಮಲಿಕ್ನ ಮೊದಲ ವಿವಾಹದ ಬಗ್ಗೆ ತಿಳಿದು, ತನಗಾದ ಮೋಸದ ಬಗ್ಗೆ ಸಿಎಂ ಯೋಗಿ ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಅದರಂತೆ ಈಗ ಕ್ರಮವಾಗಿದೆ.
ಮೊದಲ ಪತ್ನಿಯೂ ಹಿಂದು, ಆಕೆಯನ್ನೂ ಇಸ್ಲಾಂಗೆ ಮತಾಂತರಿಸಿದ್ದ: ಈ ಬಗ್ಗೆ ತಿಳಿದ ವೈದ್ಯೆ ಪ್ರತಿಭಟಿಸಿದ್ದಾರೆ. ಮೊದಲ ಪತ್ನಿಯೂ ಹಿಂದುವಾಗಿದ್ದು, ಆಕೆಯನ್ನೂ ಮತಾಂತರಿಸಿದ್ದಾನೆ. ಇದೆಲ್ಲವೂ ತಿಳಿದ ಬಳಿಕ ಹಿಂದು ವೈದ್ಯೆ ಆತನಿಂದ ದೂರವಾಗಿದ್ದರು. ಆದರೆ, ಮಲಿಕ್ ಆಕೆಯನ್ನು ಮತಾಂತರಕ್ಕೆ ನಿರಂತರವಾಗಿ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ. ತನಗಾಗುತ್ತಿರುವ ಶೋಷಣೆ ಮತ್ತು ಕಿರುಕುಳದ ಬಗ್ಗೆ ವೈದ್ಯೆಯು ಸಿಎಂ ಯೋಗಿ ಆದಿತ್ಯನಾಥ್ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಯೋಗಿ ಸರ್ಕಾರ, ವೈದ್ಯನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಿ, ಮತಾಂತರ ಮತ್ತು ಲವ್ ಜಿಹಾದ್ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ. ಜೊತೆಗೆ, ಸಮಿತಿಯೊಂದನ್ನು ರಚಿಸಿ ತನಿಖೆ ನಡೆಸಲು ಸೂಚಿಸಿದೆ. ವರದಿ ಬಂದ ಬಳಿಕ ವೈದ್ಯನ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ವಿಶ್ವವಿದ್ಯಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆ ಮಹಿಳೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಇಂದು (ಮಂಗಳವಾರ) ಭೇಟಿಯಾದರು. ಇತ್ತ, ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆ ಅಪರ್ಣಾ ಯಾದವ್ ಅವರು ಪ್ರಕರಣವನ್ನು ಖಂಡಿಸಿದ್ದಾರೆ. ಕೆಜಿಎಂಯುನಲ್ಲಿನ ಹಿರಿಯ ವೈದ್ಯರು ಜೂನಿಯರ್ ವೈದ್ಯರೊಂದಿಗೆ ಲವ್ ಜಿಹಾದ್‌ನಲ್ಲಿ ತೊಡಗಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಜೂನಿಯರ್ ವೈದ್ಯರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದ ಸಂಗತಿಯೂ ಬಯಲಾಗಿದೆ.

