ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆ ಭುಗಿಲೆದ್ದಿದ್ದು, ಇದರ ಬೆನ್ನಲ್ಲೇ ರಷ್ಯಾ, ಭಾರತದೊಂದಿಗೆ ಉದ್ವಿಗ್ನತೆಯನ್ನು ಆದಷ್ಟು ಬೇಗ ಕಡಿಮೆ ಮಾಡುವಂತೆ ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಮಂಧ್ಯಂತರ ಸರ್ಕಾರಕ್ಕೆ ಸಲಹೆ ನೀಡಿದೆ.
ಈ ಕುರಿತು ಢಾಕಾದಲ್ಲಿ ಮಾತನಾಡಿರುವ ಬಾಂಗ್ಲಾದೇಶಕ್ಕೆ ರಷ್ಯಾದ ರಾಯಭಾರಿ ಅಲೆಕ್ಸಾಂಡರ್ ಗ್ರಿಗೊರಿವಿಚ್ ಖೋಜಿನ್,’1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯದಲ್ಲಿ ಭಾರತದ ನಿರ್ಣಾಯಕ ಪಾತ್ರವನ್ನು ಸ್ಮರಿಸಲು ಇದು ಸಕಾಲ’ ಎಂದು ಸೂಚ್ಯವಾಗಿ ಹೇಳಿದ್ದಾರೆ. ಪ್ರಾದೇಶಿಕ ಸ್ಥಿರತೆಗಾಗಿ ಉಭಯ ರಾಷ್ಟ್ರಗಳ ನಡುವೆ ಸುಮಧುರ ಸಂಬಂಧ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ದಕ್ಷಿಣ ಏಷ್ಯಾದ ಎರಡು ನೆರೆಹೊರೆಯವರ ನಡುವಿನ ಉತ್ತಮ ಸಂಬಂಧಗಳು, ಪ್ರಾದೇಶಿಕ ಸ್ಥಿರತೆ ಕಾಪಾಡುವಲ್ಲಿ ಅತ್ಯಂತ ಮಹತ್ವದ ಪಾತ್ರನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶವು ಈ ಕೂಡಲೇ ಭಾರತದೊಂದಿಗಿ ಉದ್ವಿಗ್ನತೆಯನ್ನು ಶಮನ ಮಾಡುವತ್ತ ಗಮನಹರಿಸಬೇಕು ಎಂದು ರಷ್ಯಾದ ರಾಯಾಭಾರಿ ಕರೆ ನೀಡಿದ್ದಾರೆ.
‘1971ರಲ್ಲಿ ದೇಶ ಸ್ವಾತಂತ್ರ್ಯವಾಗಲು ಭಾರತ ನೀಡಿದ ಸಹಕಾರವನ್ನು ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಮಧ್ಯಂತರ ಸರ್ಕಾರ ನೆನೆಪು ಮಾಡಿಕೊಳ್ಳಬೇಕು. ಅಲ್ಲದೇ ಬಾಂಗ್ಲಾದೇಶವನ್ನು ಅಧಿಕೃತವಾಗಿ ಗುರುತಿಸುವ ಪ್ರಕ್ರಿಯೆಯಲ್ಲಿ ರಷ್ಯಾದ ಪಾತ್ರವನ್ನೂ ಪರಿಗಣಿಸಿ, ಭಾರತದೊಂದಿಗೆ ಸಂಬಂಧ ಸುಧಾರಣೆಗೆ ಮುಂದಾಗಬೇಕು’ ಎಂದು ರಾಯಭಾರಿ ಖೋಜಿನ್ ಸಲಹೆ ನೀಡಿದ್ದಾರೆ.

