Wednesday, December 24, 2025

WEATHER | ರಾಜ್ಯಾದ್ಯಂತ ಶೀತಗಾಳಿ ಆರ್ಭಟ: ಒಣಹವೆ ನಡುವೆ ತಾಪಮಾನ ಏರುಪೇರು

ರಾಜ್ಯಾದ್ಯಂತ ಶೀತಗಾಳಿಯ ಆರ್ಭಟ ಜೋರಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ ಮುಂದುವರಿದಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಮುಂದಿನ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ಒಣಹವೆ ಇರಲಿದ್ದು, ತಾಪಮಾನದಲ್ಲಿ ಗಣನೀಯ ಏರುಪೇರಾಗುವ ಸಾಧ್ಯತೆಯಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮುಂಜಾನೆ ದಟ್ಟವಾದ ಮಂಜು ಆವರಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಬಹುದಾಗಿದ್ದು, ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕೆಂದು ಇಲಾಖೆ ಸೂಚಿಸಿದೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಶಾಂತವಾದ ಆದರೆ ಒಣಹವೆಯ ವಾತಾವರಣ ಇರಲಿದೆ. ಮೈಸೂರು, ಮಂಡ್ಯ, ಕೊಡಗು, ಶಿವಮೊಗ್ಗ, ಹಾಸನ ಮತ್ತು ತುಮಕೂರು ಸೇರಿದಂತೆ ದಕ್ಷಿಣದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಹೆಚ್ಚಿರಲಿದ್ದು, ಹವಾಮಾನ ಶುಷ್ಕವಾಗಿರಲಿದೆ.

ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಮತ್ತು ಕಲಬುರಗಿ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಇದ್ದ ಒಣಹವೆಯ ಸ್ಥಿತಿ ಇಂದೂ ಕೂಡ ಮುಂದುವರಿಯಲಿದೆ.

ಒಟ್ಟಾರೆಯಾಗಿ ರಾಜ್ಯದ ಗಡಿಭಾಗಗಳಿಂದ ಕರಾವಳಿಯವರೆಗೆ ಚಳಿಯ ಪ್ರಭಾವ ದಟ್ಟವಾಗಿದ್ದು, ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

error: Content is protected !!