ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಕಡಿಮೆಯಾಗಿದ್ದ ವ್ಹೀಲಿಂಗ್ ಎಂಬ ಅಪಾಯಕಾರಿ ‘ವೈರಸ್’ ಮತ್ತೆ ಸದ್ದು ಮಾಡುತ್ತಿದೆ. ಯುವ ಸಮೂಹದ ಪ್ರಾಣಕ್ಕೆ ಸಂಚಕಾರ ತರುವ ಈ ಕೃತ್ಯದ ವಿರುದ್ಧ ಬೆಂಗಳೂರು ಪೊಲೀಸರು ಸಮರ ಸಾರಿದ್ದು, ಇದೀಗ ಆಟೋ ರಿಕ್ಷಾದಲ್ಲಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಚಾಲಕನೊಬ್ಬ ಅರೆಸ್ಟ್ ಆಗಿದ್ದಾನೆ.
ಕೆ.ಆರ್. ಪುರಂನ ಪ್ಲೇಗ್ ಮಾರಮ್ಮ ಬೀದಿಯ ನಿವಾಸಿ ಉದಯ್ ವಿಕ್ರಮ್ (28) ಎಂಬಾತನೇ ಪೊಲೀಸರ ಅತಿಥಿಯಾದ ವ್ಯಕ್ತಿ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಈತ, ಕಳೆದ ತಿಂಗಳು ತನ್ನ ಆಟೋದಲ್ಲಿ ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್ ಸ್ಟಂಟ್ ಮಾಡಿದ್ದ. ಸ್ನೇಹಿತನ ಸಹಾಯದಿಂದ ಇದನ್ನು ವೀಡಿಯೋ ಮಾಡಿಸಿಕೊಂಡು, ‘ಹೀರೋ’ ಆಗಲು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಆದರೆ, ಈ ವೀಡಿಯೋ ಪೊಲೀಸರ ಕೈಸೇರುತ್ತಿದ್ದಂತೆ ಆತನ ಆಟಕ್ಕೆ ಬ್ರೇಕ್ ಬಿದ್ದಿದೆ.
ಆರೋಪಿ ಉದಯ್ ವಿರುದ್ಧ ಬೆಂಗಳೂರು ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಆರೋಪಿಯ ಆಟೋವನ್ನು ಕೆ.ಆರ್. ಪುರಂ ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದು, ನ್ಯಾಯಾಲಯದ ಅನುಮತಿಯ ನಂತರವಷ್ಟೇ ಅದನ್ನು ಬಿಡುಗಡೆ ಮಾಡಲು ಸಾಧ್ಯ ಎಂದು ತಿಳಿಸಿದ್ದಾರೆ.

