Wednesday, December 24, 2025

ಯುಟ್ಯೂಬರ್‌ ಭೇಟಿ ಮಾಡಲು ರಾಜಸ್ಥಾನಕ್ಕೆ ಒಬ್ಬನೇ ಹೋದ ಬೆಂಗಳೂರಿನ 15ರ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುಟ್ಯೂಬರ್‌ ಒಬ್ಬನನ್ನು ಭೇಟಿ ಮಾಡೋದಕ್ಕೆ ಬೆಂಗಳೂರಿನ ಬಾಲಕನೊಬ್ಬ ಬರೋಬ್ಬರಿ 1900 ಕಿಮೀ ದೂರ ಟ್ರಾವೆಲ್‌ ಮಾಡಿದ್ದಾನೆ.

ಹೌದು, 15ರ ಬಾಲಕ ಒಬ್ಬನೇ ಬೆಂಗಳೂರಿನಿಂದ ರಾಜಸ್ಥಾನಕ್ಕೆ ತೆರಳಿದ್ದಾನೆ. ಯುಟ್ಯೂಬರ್‌ ಆಗಲು ಇಚ್ಛಿಸಿದ್ದ ಬೆಂಗಳೂರಿನ ಬಾಲಕ ಮತ್ತೊಬ್ಬ ಫೇಮಸ್ ಯುಟ್ಯೂಬರ್‌ನ್ನು ಭೇಟಿ ಮಾಡಿ ಮಾರ್ಗದರ್ಶನ ತೆಗೆದುಕೊಳ್ಳಲು ಹೋಗಿದ್ದಾನೆ. ಸದ್ಯ ಈ ನ್ಯೂಸ್‌ ಎಲ್ಲೆಡೆ ವೈರಲ್‌ ಆಗಿದೆ.

ಸಾಮಾಜಿಕ ಮಾಧ್ಯಮಗಳು, ಗೇಮ್​ಗಳು ಮಕ್ಕಳ ಮೇಲೆ ಅದೆಷ್ಟು ಪ್ರಭಾವ ಬೀರಿವೆ ಎಂಬುದು ಹಲವು ಘಟನೆಗಳಿಂದ ಸಾಬೀತಾಗಿದೆ. ಇತ್ತ, ಅವರ ತಂದೆ ಪುತ್ರ ಕಾಣೆಯಾದ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಯ ಪ್ರಯಾಣದದ ಬಗ್ಗೆ ತನಿಖೆ ನಡೆಸಿದಾಗ ಆತ ರಾಜಸ್ಥಾನದ ಅಲ್ವಾರ್​​ನಲ್ಲಿ ಇರುವುದು ಪತ್ತೆಯಾಗಿದೆ. ಇದೀಗ, ಬಾಲಕನನ್ನು ಪೊಲೀಸರು ಮತ್ತು ಕುಟುಂಬಸ್ಥರು ಮನೆಗೆ ಕರೆತರುತ್ತಿದ್ದಾರೆ.

ಯೂಟ್ಯೂಬ್​ ಗೇಮ್​ಗಳ ಬಗ್ಗೆ ಆಸಕ್ತಿ ಹೊಂದಿದ್ದ ಬೆಂಗಳೂರಿನ ನಿವಾಸಿಯಾದ 15 ವರ್ಷದ ಬಾಲಕ, ರಾಜಸ್ಥಾನ ಮೂಲದ ಯೂಟ್ಯೂಬರ್ ಅನ್ನು ಫಾಲೋ ಮಾಡುತ್ತಿದ್ದ. ಆತನ ಬಳಿ ಈ ಕುರಿತು ತಂತ್ರಗಳನ್ನು ಕಲಿಯುವ ಸಲುವಾಗಿ ನೇರವಾಗಿ ಭೇಟಿಯಾಗಲು ಬಯಸಿ ಕಳೆದ ಶನಿವಾರ ಮನೆಯಲ್ಲಿ ಯಾರಿಗೂ ತಿಳಿಸದೆ ರಾಜಸ್ಥಾನಕ್ಕೆ ಪ್ರಯಾಣಿಸಿದ್ದಾನೆ.

ಇತ್ತ ಮನೆಯಲ್ಲಿ ಮಗ ಕಾಣದಿದ್ದಾಗ ಪೋಷಕರು ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ. ಅದರಂತೆ, ಪೊಲೀಸರು ತನಿಖೆ ಆರಂಭಿಸಿದಾಗ, ಬಾಲಕ ಬೆಂಗಳೂರು ರೈಲು ನಿಲ್ದಾಣದ ಮೂಲಕ ಪಯಣಿಸಿದ್ದು ಗೊತ್ತಾಗಿದೆ. ಕೊನೆಯಲ್ಲಿ ಆತ ರಾಜಸ್ಥಾನದ ಅಲ್ವಾರ್​ ಬಸ್​ ನಿಲ್ದಾಣದಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಕರ್ನಾಟಕದಿಂದ 1900 ಕಿಮೀಗೂ ದೂರ ಇರುವ ರಾಜಸ್ಥಾನಕ್ಕೆ ಬಂದ ಬಗ್ಗೆ ಬಾಲಕನೇ ಮಾಹಿತಿ ನೀಡಿದ್ದಾನೆ. ಅಲ್ವಾರ್​​ನ ಬನ್ಸೂರ್ ಪ್ರದೇಶದ ಯೂಟ್ಯೂಬರ್ ಅನ್ನು ಭೇಟಿಯಾಗಲು ಇಲ್ಲಿಗೆ ಬಂದೆ. ತಾನು ಮೊದಲು ಬೆಂಗಳೂರು ನಿಲ್ದಾಣದಿಂದ ರೈಲಿನಲ್ಲಿ ಗ್ವಾಲಿಯರ್‌ಗೆ ಬಂದೆ. ಅಲ್ಲಿಂದ, ಅಲ್ವಾರ್‌ಗೆ ಬರುವ ಮೊದಲು ವಿವಿಧ ಜಿಲ್ಲೆಗಳಿಗೆ ಬಸ್‌ನಲ್ಲಿ ಪ್ರಯಾಣಿಸಿದೆ. ಬಳಿಕ ಹಾಗೋ ಹೀಗೋ ಮಾಡಿ ಅಲ್ವಾರ್​​ಗೆ ಬಂದೆ. ಯೂಟ್ಯೂಬರ್​ ಅನ್ನು ಭೇಟಿಯಾಗಲು ಆತನನ್ನು ಸಂಪರ್ಕಿಸಿದೆ. ಆದರೆ, ಆತ ಮೊದಲು ಓದು ಮುಗಿಸು, ನಂತರ ಯೂಟ್ಯೂಬರ್​ ಆಗು ಎಂದು ತಿಳಿಸಿದ. ನೇರವಾಗಿ ಭೇಟಿಯಾಗಲು ಅವಕಾಶ ಸಿಗಲಿಲ್ಲ ಎಂದು ಬಾಲಕ ತಿಳಿಸಿದ್ದಾನೆ.

ಬೆಂಗಳೂರಿನ ವಿದ್ಯಾರ್ಥಿ ಅಲ್ವಾರ್ ಬಸ್ ನಿಲ್ದಾಣದಲ್ಲಿ ಅಲೆದಾಡುತ್ತಿದ್ದಾಗ ಅಲ್ಲಿನ ಸಿಬ್ಬಂದಿ ಗಮನಿಸಿ ವಿಚಾರಿಸಿದ್ದಾರೆ. ಬಳಿಕ ಸದರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಕನನ್ನು ಠಾಣೆಗೆ ಕರೆದೊಯ್ದು ಮಾಹಿತಿ ಪಡೆದಿದ್ದಾರೆ. ಬಳಿಕ ಬಾಲಕನ ತಂದೆಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾರೆ. ಬೆಂಗಳೂರು ಪೊಲೀಸ್ ಅಧಿಕಾರಿಗಳೊಂದಿಗೆ ಬಾಲಕನ ತಂದೆ ಅಲ್ವಾರ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಸದ್ಯ ಮಗುವನ್ನು ತಂದೆಗೆ ಒಪ್ಪಿಸಲಾಗಿದೆ. ಅಲ್ಲಿಂದ ಆತನನ್ನು ವಾಪಸ್​ ಕರೆತರಲಾಗುತ್ತಿದೆ. ಮಕ್ಕಳು ಹೀಗೆ ಏಕಾಏಕಿ ಮನೆ ಬಿಟ್ಟು ಬರಬಾರದು. ಇದು ಕುಟುಂಬಗಳಿಗೆ ಸಮಸ್ಯೆ ಉಂಟುಮಾಡುತ್ತದೆ. ಸದ್ಯ ಈ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

error: Content is protected !!