ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬಳಿಕ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಹಾದಿ ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳುನಡೆಯುತ್ತಿದ್ದು, ಈ ಕುರಿತು ಹಾದಿ ಸಹೋದರ ನೀಡಿರುವ ಸ್ಪೋಟಕ ಹೇಳಿಕೆಯೊಂದು, ಪ್ರತಿಭಟನೆಗಳ ಸ್ವರೂಪವನ್ನೇ ಬದಲಿಸುವ ಸಾಧ್ಯತೆ ಇದೆ.
ದುಷ್ಕರ್ಮಿಗಳಿಂದ ಗುಂಡೇಟಿಗೆ ಬಲಿಯಾದ ಷರೀಫ್ ಉಸ್ಮಾನ್ ಹಾದಿ ಅವರ ಸಹೋದರ ಷರೀಫ್ ಓಮರ್ ಹಾದಿ. ‘ನನ್ನ ಅಣ್ಣನ ಕೊಲೆಗೆ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರೇ ಕಾರಣ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಫೆಬ್ರವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಂಪೂರ್ಣವಾಗಿ ಹಳಿ ತಪ್ಪಿಸುವ ದುರುದ್ದೇಶದಿಂದ, ಮುಹಮ್ಮದ್ ಯೂನಸ್ ಸರ್ಕಾರವೇ ಉಸ್ಮನ್ ಹಾದಿ ಕೊಲೆಗೆ ಸಂಚು ರೂಪಿಸಿದೆ. ಈ ಕೊಲೆಯನ್ನು ಬಾಂಗ್ಲಾದೇಶದಲ್ಲಿ ಭಾರತ ದ್ವೇಷ ಬಿತ್ತಲೂ ಬಳಸಿಕೊಳ್ಳಲಾಗಿದೆ ಎಂದು ಷರೀಪ್ ಓಮರ್ ಹಾದಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ನೀವು ನನ್ನ ಸಹೋದರನನ್ನು ಕೊಲ್ಲುವಂತೆ ಮಾಡಿದ್ದೀರಿ. ಆತನ ಸಾವನ್ನು ವಿವಾದವನ್ನಾಗಿ ಪರಿವರ್ತಿಸಿ, ಚುನಾವಣೆಗಳನ್ನು ಮುಂದೂಡುವ ಅಥವಾ ಅದರ ಹಳಿತಪ್ಪಿಸುವ ಷಡ್ಯಂತ್ರ ರೂಪಿಸಿದ್ದೀರಿ. ಬಾಂಗ್ಲಾದೇಶದ ಜನ ನಿಮ್ಮ ಷಡ್ಯಂತ್ರವನ್ನು ಶೀಘ್ರದಲ್ಲೇ ಅತರಿತುಕೊಳ್ಳಲಿದ್ದಾರೆ ಎಂದು ಉಸ್ಮಾನ್ ಹಾದಿ ಸಹೋದರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳು ಬಾಂಗ್ಲಾದೇಶದ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂಬ ಮುನ್ಸೂಚನೆ ನೀಡುತ್ತಿದೆ.
ಢಾಕಾದ ಶಹಬಾಗ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಡಿದ ಷರೀಫ್ ಓಮರ್ ಹಾದಿ, ‘ಯೂನಸ್ ಸರ್ಕಾರ ನನ್ನ ಅಣ್ಣನ ಆದರ್ಶಗಳನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಆತನ ಸಾವಿನಲ್ಲೂ ತನ್ನ ರಾಜಕೀಯ ಲಾಭವನ್ನು ಹುಡುಕುತ್ತಿದೆ. ಆದರೆ ಇದು ಬಹಳ ದಿನಗಳ ಕಾಲ ನಡೆಯುವುದಿಲ್ಲ’ ಎಂದು ಗುಡುಗಿದ್ದಾರೆ.
ಉಸ್ಮಾನ್ ಹಾದಿ ಫೆಬ್ರವರಿಯಲ್ಲಿ ಚುನಾವಣೆ ನಡೆಯಬೇಕೆಂದು ಬಯಸಿದ್ದರು. ಆದರೆ ಯೂನಸ್ ಸರ್ಕಾರ ಅವರ ಸಾವನ್ನು ನೆಪವಾಗಿ ಬಳಸಿಕೊಂಡು ಚುನಾವಣೆಗಳನ್ನು ಮುಂದೂಡಲು ಷಡ್ಯಂತ್ರ ರೂಪಿಸುತ್ತಿದೆ. ಸರ್ಕಾರಕ್ಕೆ ಹಾದಿ ಅವರ ಆದರ್ಶಗಳ ಬಗ್ಗೆ ಕಿಂಚಿತ್ತಾದರೂ ಬೆಲೆ ಇದ್ದರೆ, ಫೆಬ್ರವರಿಯಲ್ಲೇ ಚುನಾವಣೆ ನಡೆಸಬೇಕು ಎಂದು ಓಮರ್ ಹಾದಿ ಒತ್ತಾಯಿಸಿದ್ದಾರೆ.

