ಹೊಸದಿಗಂತ ತುಮಕೂರು:
ಇಂದಿನ ಒತ್ತಡದ ಬದುಕಿನಲ್ಲಿ ತಲ್ಲಣಗೊಂಡಿರುವ ಯುವ ಮನಸ್ಸುಗಳಿಗೆ ನೆಮ್ಮದಿ ಮತ್ತು ಮಾರ್ಗದರ್ಶನ ನೀಡುವ ಉದ್ದೇಶದಿಂದ, ಕನಕದಾಸರ ಅಮರ ಸಂದೇಶದಡಿ ‘ತಲ್ಲಣಿಸದಿರು ಮನವೇ’ ಎಂಬ ವಿಶಿಷ್ಟ ಸಾಂಸ್ಕೃತಿಕ ಚಿಂತನ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 27ರ ಶನಿವಾರ ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಈ ಅರ್ಥಪೂರ್ಣ ಸಮಾರಂಭ ನಡೆಯಲಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠವು ಜಾತಿ-ಮತಗಳ ಬೇಧವಿಲ್ಲದೆ ಸರ್ವ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದೆ. ಅದರ ಅಂಗವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಲಿದೆ,” ಎಂದರು.
ಕಾರ್ಯಕ್ರಮದ ಸಂಯೋಜಕ ಡಾ. ಮಂಜಪ್ಪ ಮಾಗೋಡಿ ಮಾತನಾಡಿ, “ಈಗಾಗಲೇ ರಾಜ್ಯದ ವಿವಿಧೆಡೆ ನಡೆದ ನಾಲ್ಕು ಕಾರ್ಯಕ್ರಮಗಳು ಅಭೂತಪೂರ್ವ ಯಶಸ್ಸು ಕಂಡಿವೆ. ತುಮಕೂರಿನಲ್ಲಿ ನಡೆಯಲಿರುವುದು 5ನೇ ಕಾರ್ಯಕ್ರಮವಾಗಿದ್ದು, ಹಾದಿ ತಪ್ಪುತ್ತಿರುವ ಅಥವಾ ಆತಂಕದಲ್ಲಿರುವ ಇಂದಿನ ಪೀಳಿಗೆಗೆ ಜೀವನ ಪ್ರೀತಿಯನ್ನು ಕಲಿಸಿಕೊಡುವುದು ನಮ್ಮ ಆಶಯ,” ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿ ‘ಉದ್ಯೋಗ ಸಿರಿ’ ಎಂಬ ವಿಭಾಗವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ವಹಿಸಲಿದ್ದು, ಕಾಗಿನೆಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ಘನ ಉಪಸ್ಥಿತಿ ಇರಲಿದೆ.

