ಹೊಸದಿಗಂತ ವಿಜಯಪುರ:
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಮುದ್ದಾಪುರ ಕ್ರಾಸ್ ಬಳಿ ಇಂದು ಮಧ್ಯಾಹ್ನ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವಯೋವೃದ್ಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುದ್ದೇಬಿಹಾಳದಿಂದ ಬಾಗಲಕೋಟೆ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ನಿಡಗುಂದಿಯಿಂದ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತ ದುರ್ದೈವಿಗಳನ್ನು ಮುದ್ದೇಬಿಹಾಳ ತಾಲೂಕಿನ ಕೊಪ್ಪ ತಾಂಡಾದ ಶಿವಪ್ಪ ರಾಮಪ್ಪ ಲಮಾಣಿ (60) ಹಾಗೂ ಬಸರಕೋಡ ಗ್ರಾಮದ ಬಸಪ್ಪ ಸಂಗಪ್ಪ ಸೂಳಿಬಾವಿ (67) ಎಂದು ಗುರುತಿಸಲಾಗಿದೆ. ಇಬ್ಬರು ಹಿರಿಯರು ಸಂಚರಿಸುತ್ತಿದ್ದ ಬೈಕ್‌ಗೆ ಬಸ್ ನೇರವಾಗಿ ಡಿಕ್ಕಿ ಹೊಡೆದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ನಿಡಗುಂದಿ ಸಿಪಿಐ ಶರಣಗೌಡ ಗೌಡರ ಹಾಗೂ ಪಿಎಸ್ಐ ಶಿವಾನಂದ ಪಾಟೀಲ ಅವರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

