ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಸೀಬರ್ಡ್ ಬಸ್ ದುರಂತ ಏಳು ಜನರನ್ನು ಬಲಿಪಡೆದಿತ್ತು. ಈ ಘಟನೆಯಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿದ್ದರೂ, ಸಾರಿಗೆ ಸಂಸ್ಥೆಯ ಕೆಲವು ಚಾಲಕರು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಹುಬ್ಬಳ್ಳಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ (ನಂಬರ್: KA 63 F 0163) ಧಾರವಾಡದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಲಿಸುತ್ತಿತ್ತು. ಈ ವೇಳೆ ಬಸ್ ಚಾಲಕ ಸ್ಟೇರಿಂಗ್ ಮೇಲೆ ಹಿಡಿತ ಸಾಧಿಸುವ ಬದಲು, ಮೊಬೈಲ್ ಫೋನ್‌ನಲ್ಲಿ ಸಂಭಾಷಣೆ ನಡೆಸುವುದರಲ್ಲಿ ಮಗ್ನನಾಗಿದ್ದನು. ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು, ಮತ್ತೊಂದು ಕೈಯನ್ನು ಕಿವಿಗೆ ಹಚ್ಚಿಕೊಂಡು ದೀರ್ಘಕಾಲ ಮಾತನಾಡುತ್ತಾ ಬಸ್ ಚಾಲನೆ ಮಾಡಿದ್ದಾನೆ.
ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಚಾಲಕನ ಈ ಅಪಾಯಕಾರಿ ನಡವಳಿಕೆಯನ್ನು ಕಂಡು ಆತಂಕಗೊಂಡ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ದೃಶ್ಯವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
“ಅಪಘಾತಗಳು ಸಂಭವಿಸಿದಾಗ ಚಾಲಕರನ್ನು ದೂಷಿಸಲಾಗುತ್ತದೆ, ಆದರೆ ಇಂತಹ ನಿರ್ಲಕ್ಷ್ಯತನವೇ ದುರಂತಗಳಿಗೆ ಅಡಿಪಾಯ” ಎಂದು ನೆಟ್ಟಿಗರು ಸಾರಿಗೆ ಇಲಾಖೆಯ ವಿರುದ್ಧ ಕಿಡಿಕಾರುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆಯನ್ನು ಗಾಳಿಗೆ ತೂರಿದ ಈ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ.

