Friday, December 26, 2025

ಬಾಂಗ್ಲಾ ಮೇಲೆ ಆರ್ಥಿಕ ದಿಗ್ಬಂಧನ ಹೇರಿ: ಬೆಳಗಾವಿ ಪ್ರತಿಭಟನಾಕಾರರ ಆಗ್ರಹ!

ಹೊಸದಿಗಂತ ಬೆಳಗಾವಿ:

ಬಾಂಗ್ಲಾದೇಶದಲ್ಲಿ ಹಿಂದು ಯುವಕನ ಬರ್ಬರ ಹತ್ಯೆಯನ್ನು ಖಂಡಿಸಿ ಹಾಗೂ ಅಲ್ಲಿನ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕೆಂದು ಆಗ್ರಹಿಸಿ, ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಕೇಂದ್ರವಾದ ಬೋಗಾರವೆಸ್ ಸಂಭಾಜಿ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ಉಭಯ ದೇಶಗಳ ಧ್ವಜಗಳನ್ನು ಸುಟ್ಟು ಹಾಕುವ ಮೂಲಕ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗಂಟೆಗಳ ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ್ದರಿಂದ ನಗರದ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು.

“ಅಖಂಡ ಹಿಂದೂ ರಾಷ್ಟ್ರವನ್ನು ಇಂತಹ ಹೇಡಿ ಕೃತ್ಯಗಳಿಂದ ಬೆದರಿಸಲು ಸಾಧ್ಯವಿಲ್ಲ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಆ ದೇಶದ ಮೇಲೆ ಆರ್ಥಿಕ ಮತ್ತು ವ್ಯಾಪಾರ ದಿಗ್ಬಂಧನ ಹೇರಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಬೆಳಗಾವಿಯ ಕಾರಂಜಿಮಠದ ಪರಮಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿ, “ಭಾರತದಿಂದಲೇ ಅಸ್ತಿತ್ವಕ್ಕೆ ಬಂದ ಬಾಂಗ್ಲಾದೇಶ ಇಂದು ಭಾರತದ ವಿರುದ್ಧವೇ ದೌರ್ಜನ್ಯ ಎಸಗುತ್ತಿದೆ. ಅಂದು ಕಾಂಗ್ರೆಸ್ ನಾಯಕರ ನಿರ್ಧಾರದಿಂದ ಪಾಕಿಸ್ತಾನ ವಿಭಜನೆಯಾಯಿತು. ಇಂದು ಈ ‘ಪಾಪಿ’ ದೇಶಗಳು ತಂದೆಯಂತಿರುವ ಭಾರತದ ಮೇಲೆಯೇ ಸವಾರಿ ಮಾಡುತ್ತಿವೆ. ನಿಮ್ಮ ಇಂತಹ ಕೃತ್ಯಗಳು ನಿಲ್ಲದಿದ್ದರೆ, ಭಾರತದ ಎಲ್ಲಾ ಹಿಂದೂಗಳು ಒಗ್ಗೂಡಿ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ಕಟು ಭಾಷೆಯಲ್ಲಿ ಎಚ್ಚರಿಸಿದರು.

ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗುವವರೆಗೆ ಮತ್ತು ಹಿಂದೂಗಳಿಗೆ ರಕ್ಷಣೆ ಸಿಗುವವರೆಗೆ ಈ ಹೋರಾಟ ನಿಲ್ಲದು ಎಂದು ಸಂಘಟನೆಯ ಪ್ರಮುಖರು ಈ ಸಂದರ್ಭದಲ್ಲಿ ತಿಳಿಸಿದರು.

error: Content is protected !!