ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಿಂದ ಈ ಬಾರಿ ಆಸ್ಕರ್ ಅಂಗಳಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿರುವ ಹಿಂದಿ ಸಿನಿಮಾ ‘ಹೋಮ್‌ಬೌಂಡ್’ ಈಗ ಸಂಕಷ್ಟಕ್ಕೆ ಸಿಲುಕಿದೆ. ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಈಗಾಗಲೇ ಟಾಪ್ 15ರ ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದು ಮಿಂಚುತ್ತಿದ್ದ ಈ ಚಿತ್ರದ ವಿರುದ್ಧ ಕೃತಿಚೌರ್ಯದ ಗಂಭೀರ ಆರೋಪ ಕೇಳಿಬಂದಿದೆ.
ಖ್ಯಾತ ಪತ್ರಕರ್ತೆ ಮತ್ತು ಲೇಖಕಿ ಪೂಜಾ ಚಂಗೋಯ್ವಾಲ ಅವರು ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಚಿತ್ರದ ನಿರ್ಮಾಣ ಸಂಸ್ಥೆಯಾದ ಕರಣ್ ಜೋಹರ್ ಒಡೆತನದ ಧರ್ಮಾ ಪ್ರೊಡಕ್ಷನ್ಸ್ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ವಿರುದ್ಧ ಅವರು ದಾವೆ ಹೂಡಿದ್ದಾರೆ. ತಾವು 2021ರಲ್ಲಿ ಬರೆದಿದ್ದ ‘ಹೋಮ್‌ಬೌಂಡ್’ ಎಂಬ ಕಥೆಯನ್ನೇ ಅನುಮತಿ ಇಲ್ಲದೆ ಸಿನಿಮಾ ಮಾಡಲಾಗಿದೆ ಎಂಬುದು ಪೂಜಾ ಅವರ ವಾದ.
ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಧರ್ಮಾ ಪ್ರೊಡಕ್ಷನ್ಸ್, ಇವೆಲ್ಲವೂ ಆಧಾರರಹಿತ ಎಂದು ಹೇಳಿದೆ. “ನಮ್ಮ ಸಿನಿಮಾ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಬಷರತ್ ಪೀರ್ ಅವರ ಲೇಖನವನ್ನು ಆಧರಿಸಿದೆ. ಅದಕ್ಕೆ ಬೇಕಾದ ಎಲ್ಲಾ ಕಾನೂನುಬದ್ಧ ಅನುಮತಿಗಳನ್ನು ನಾವು ಪಡೆದುಕೊಂಡಿದ್ದೇವೆ ಮತ್ತು ಮೂಲ ಲೇಖಕರಿಗೆ ಚಿತ್ರದಲ್ಲಿ ಗೌರವ ಸಲ್ಲಿಸಿದ್ದೇವೆ” ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ, ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿರುವ ಚಿತ್ರತಂಡಕ್ಕೆ ಈ ಕಾನೂನು ಹೋರಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನ್ಯಾಯಾಲಯದಲ್ಲಿ ಈ ವಿವಾದ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

