ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಹರ್ಬಲ್ ಡ್ರಿಂಕ್ಸ್ ಹಾಗೂ ಫ್ಲೇವರ್ಡ್ ಪಾನೀಯಗಳನ್ನು ಇನ್ಮುಂದೆ ‘ಚಹಾ’ ಅಥವಾ ‘ಟೀ’ ಎಂಬ ಹೆಸರಿನಲ್ಲಿ ಮಾರಾಟ ಮಾಡುವಂತಿಲ್ಲ. ಈ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಡಿಸೆಂಬರ್ 24ರಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
FSSAI ಸ್ಪಷ್ಟಪಡಿಸಿರುವಂತೆ, ‘ಕ್ಯಾಮೆಲಿಯಾ ಸಿನೆನ್ಸಿಸ್’ ಎಂಬ ಸಸ್ಯದಿಂದ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ‘ಚಹಾ’ ಎಂದು ಕರೆಯಲು ಅರ್ಹತೆ ಇದೆ. ಉದಾಹರಣೆಗೆ:
ಬ್ಲಾಕ್ ಟೀ
ಗ್ರೀನ್ ಟೀ
ಕಾಂಗ್ರಾ ಟೀ
ಇವುಗಳನ್ನು ಹೊರತುಪಡಿಸಿ, ಹೂವು, ಬೇರು ಅಥವಾ ಇತರ ಗಿಡಮೂಲಿಕೆಗಳಿಂದ ತಯಾರಿಸಿದ ಪಾನೀಯಗಳನ್ನು ‘ಟೀ’ ಎಂದು ಕರೆಯುವುದು ಗ್ರಾಹಕರನ್ನು ದಿಕ್ಕು ತಪ್ಪಿಸುವ ಹಾದಿಯಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಸದ್ಯ ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಗಳಲ್ಲಿ ಹರ್ಬಲ್ ಟೀ, ಜಾಸ್ಮಿನ್ ಟೀ, ರೂಯಿಬೋಸ್ ಟೀ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿರುವ ಉತ್ಪನ್ನಗಳು ಈ ಹೊಸ ನಿಯಮದ ಅಡಿಯಲ್ಲಿ ಬರುತ್ತವೆ. ಇವುಗಳನ್ನು ಕೇವಲ ಗಿಡಮೂಲಿಕೆಗಳ ಮಿಶ್ರಣ ಅಥವಾ ‘ಇನ್ಫ್ಯೂಷನ್’ ಎಂದು ಕರೆಯಬಹುದೇ ಹೊರತು, ‘ಟೀ’ ಎಂಬ ಬ್ರ್ಯಾಂಡ್ ಹೆಸರನ್ನು ಬಳಸುವಂತಿಲ್ಲ. ಇದನ್ನು ‘ಮಿಸ್ ಬ್ರ್ಯಾಂಡಿಂಗ್’ ಎಂದು ಪರಿಗಣಿಸಲಾಗುತ್ತದೆ.
ಈ ನಿಯಮವು ಉತ್ಪಾದಕರು, ಪ್ಯಾಕೇಜಿಂಗ್ ಸಂಸ್ಥೆಗಳು ಮತ್ತು ಇ-ಕಾಮರ್ಸ್ ವೇದಿಕೆಗಳಿಗೂ ಅನ್ವಯಿಸುತ್ತದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಎಲ್ಲಾ ರಾಜ್ಯಗಳ ಆಹಾರ ಸುರಕ್ಷತಾ ಆಯುಕ್ತರಿಗೆ ಈ ಬಗ್ಗೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ.
ಈ ಹಿಂದೆ, ಹಣ್ಣಿನ ಪಾನೀಯಗಳನ್ನು ‘ORS’ ಹೆಸರಿನಲ್ಲಿ ಮಾರಾಟ ಮಾಡುವುದಕ್ಕೂ FSSAI ನಿಷೇಧ ಹೇರಿತ್ತು. ಇದೀಗ ಚಹಾ ಮಾರುಕಟ್ಟೆಯಲ್ಲೂ ಪಾರದರ್ಶಕತೆ ತರಲು ಈ ಮಹತ್ವದ ನಿರ್ಧಾರ ಕೈಗೊಂಡಿದೆ.

