ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಮನೂರು ಶಿವಶಂಕರಪ್ಪನವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮಕ್ಕೆ ನಾನು, ಡಿಸಿಎಂ ಇಬ್ಬರೂ ಬಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹಳೇ ದಾವಣಗೆರೆಯ ಮಟ್ಟಿಕಲ್ಲು ಪ್ರದೇಶದ ಕಲ್ಲೇಶ್ವರ ಮಿಲ್ ಆವರಣದಲ್ಲಿರುವ ಶಾಮನೂರು ಶಿವಶಂಕರಪ್ಪನವರ ಸಮಾಧಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಚಿವ ಈಶ್ವರ ಖಂಡ್ರೆ ಜತೆಗಿದ್ದರು.
ಇದಕ್ಕೂ ಮುನ್ನ, ನಗರದ ಎಂಬಿಎ ಮೈದಾನದ ಹೆಲಿಪ್ಯಾಡ್ನಲ್ಲಿಂದು ಮಾತನಾಡಿ, ದೆಹಲಿಗೆ ಪದೇ ಪದೇ ಹೋಗುತ್ತಿರುವ ವಿಚಾರ ಬಹಳಷ್ಟು ಚರ್ಚೆಯಾಗುತ್ತಿದೆಯಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಪದೇ ಪದೇ ಎಲ್ಲಿ ಹೋಗುತ್ತಿದ್ದೇನೆ ಎಂದು ಮರುಪ್ರಶ್ನಿಸಿ, ಸಿಡಬ್ಲ್ಯೂಸಿ ಸಭೆಗೆ ಕರೆದಿದ್ದು, ಹೋಗುತ್ತಿದ್ದೇನೆ ಎಂದರು.
ಚಿತ್ರದುರ್ಗ ಜಿಲ್ಲೆಯ ಗೊರ್ಲತ್ತು ಬಳಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಲಾರಿ ಚಾಲಕನ ತಪ್ಪಿತ್ತು ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ನಾಲ್ವರು ಹೆಣ್ಣುಮಕ್ಕಳು, ಒಂದು ಮಗು ಮತ್ತು ಲಾರಿ ಚಾಲಕ ಮೃತಪಟ್ಟಿದ್ದಾರೆ. ಬಸ್‌ಗಳಲ್ಲಿ ಸುರಕ್ಷತೆ ಕೈಗೊಳ್ಳಬೇಕಾಗುತ್ತೆ, ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.

