ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪು ಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಬ್ಬರು ಆರೋಪಿಗಳ ಎನ್‌ಐಎ ಕಸ್ಟಡಿಯನ್ನು ದೆಹಲಿ ನ್ಯಾಯಾಲಯವು ಶುಕ್ರವಾರ ವಿಸ್ತರಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರಶಾಂತ್ ಶರ್ಮಾ, ಆರೋಪಿ ಯಾಸಿರ್ ಅಹ್ಮದ್ ದಾರ್‌ನನ್ನು ಇನ್ನೂ 10 ದಿನಗಳ ಕಾಲ ಹಾಗೂ ಡಾ. ಬಿಲಾಲ್ ನಾಸಿರ್ ಮಲ್ಲಾನನ್ನು 8 ದಿನಗಳ ಕಾಲ ವಿಚಾರಣೆಗೆ ಒಳಪಡಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಅನುಮತಿ ನೀಡಿದ್ದಾರೆ.
ನ್ಯಾಯಾಲಯದಲ್ಲಿ ನಡೆದ ವಿಚಾರಣೆಯನ್ನು ಮಾಧ್ಯಮಗಳು ವರದಿ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಎನ್‌ಐಎ ತನಿಖೆಯ ಪ್ರಕಾರ, ನವೆಂಬರ್ 10ರಂದು ಕೆಂಪು ಕೋಟೆ ಹೊರಭಾಗದಲ್ಲಿ ಸ್ಫೋಟಗೊಂಡ ಕಾರನ್ನು ಉಮರ್-ಉನ್-ನಬಿ ಚಾಲನೆ ಮಾಡುತ್ತಿದ್ದನು. ಈ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿದ್ದು, ಉಮರ್-ಉನ್-ನಬಿಯೇ ಪ್ರಮುಖ ಸಂಚುಕೋರ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:
ಡಿಸೆಂಬರ್ 9ರಂದು ದೆಹಲಿಯಲ್ಲಿ ಡಾ. ಬಿಲಾಲ್ ನಾಸಿರ್ ಮಲ್ಲಾನನ್ನು ಎನ್‌ಐಎ ಬಂಧಿಸಿತ್ತು. ಆತ ಉಮರ್-ಉನ್-ನಬಿಗೆ ವ್ಯವಸ್ಥಾಪನಾ ನೆರವು ನೀಡಿದ್ದಲ್ಲದೆ, ಭಯೋತ್ಪಾದಕ ಚಟುವಟಿಕೆಗಳಿಗೆ ತಿಳಿದೂ ಆಶ್ರಯ ನೀಡಿದ್ದಾನೆ ಎಂಬ ಆರೋಪವಿದೆ. ಜೊತೆಗೆ ದಾಳಿಗೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳನ್ನು ನಾಶಪಡಿಸಿದ್ದಾನೆ ಎಂಬ ಆರೋಪವೂ ಎದುರಾಗಿದೆ.
ಇದೇ ಪ್ರಕರಣದಲ್ಲಿ ಡಿಸೆಂಬರ್ 18ರಂದು ಜಮ್ಮು–ಕಾಶ್ಮೀರದ ನಿವಾಸಿ ಯಾಸಿರ್ ಅಹ್ಮದ್ ದಾರ್ ಬಂಧನಕ್ಕೊಳಗಾಗಿದ್ದ. ಆತ ಉಮರ್-ಉನ್-ನಬಿಯ ನಿಕಟ ಸಹಚರನೆಂದು ಎನ್‌ಐಎ ಹೇಳಿದೆ. ಈವರೆಗೆ ಡಾ. ಮುಝಮ್ಮಿಲ್ ಗನೈ, ಡಾ. ಅದೀಲ್ ರಾಥರ್, ಡಾ. ಶಾಹೀನ್ ಸಯೀದ್ ಸೇರಿದಂತೆ ಒಟ್ಟು ಒಂಬತ್ತು ಆರೋಪಿಗಳನ್ನು ಎನ್‌ಐಎ ಬಂಧಿಸಿದ್ದು, ತನಿಖೆ ಇನ್ನೂ ಮುಂದುವರಿದಿದೆ.

