ಹೊಸದಿಗಂತ ಡಿಜಿಟಲ್ ಡೆಸ್ಕ್:
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದ ಬಿಜೆಪಿ ಶಾಸಕ ಬೈರತಿ ಬಸವರಾಜ್ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದ್ದರಿಂದ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಇಂದು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ಹೈಕೋರ್ಟ್ ಪೀಠ, ಬೈರತಿ ಬಸವರಾಜ್ಗೆ ಮಧ್ಯಂತ ಜಾಮೀನು ನೀಡಿ ಆದೇಶ ಹೊರಡಿಸಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜನವರಿ 6ಕ್ಕೆ ಮುಂದೂಡಿದೆ. ಹೀಗಾಗಿ ಬೈರತಿ ಬಸವರಾಜ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ನೋಟಿಸ್ ನೀಡಿದಾಗ ಬೈರತಿ ಬಸವರಾಜು ತನಿಖೆಗೆ ಹಾಜರಾಗಿದ್ದಾರೆ. ಆದರೆ ಬೈರತಿ ಬಸವರಾಜು ವಿರುದ್ಧ ಇನ್ನೂ ಆರೋಪಪಟ್ಟಿ ಸಲ್ಲಿಸಿಲ್ಲ. ಆರೋಪಪಟ್ಟಿ ಸಲ್ಲಿಸದಿರುವುದಕ್ಕೆ ತನಿಖಾಧಿಕಾರಿ ಸಮಂಜಸ ಕಾರಣ ನೀಡಿಲ್ಲ. ಜುಲೈ 18 ರಿಂದ ಡಿಸೆಂಬರ್ 19 ರವರೆಗೆ ಬಂಧನದಿಂದ ರಕ್ಷಣೆಯಿತ್ತು.
ಇದೇ ರಕ್ಷಣೆ ಮುಂದುವರಿಸಲು ಬೈರತಿ ಬಸವರಾಜ್ ಪರ ವಕೀಲರ ಸಂದೇಶ್ ಚೌಟ್ ಮನವಿ ಮಾಡಿದರು. ಇದನ್ನು ಆಲಿಸಿದ ನ್ಯಾಯಮೂರ್ಯಿ ಜಿ.ಬಸವರಾಜ ಅವರಿದ್ದ ಹೈಕೋರ್ಟ್ ಪೀಠ, ಮಧ್ಯಂತರ ಜಾಮೀನು ನೀಡಿ ಆದೇಶಿಸಿದ್ದು, ಬಂಧನವಾದರೆ ತಕ್ಷಣ ಬಿಡುಗಡೆಗೆ ತಿಳಿಸಿದೆ. ಅಲ್ಲದೇ ತನಿಖೆ ಸಹಕರಿಸಲು ಸೂಚಿಸಿದೆ. ಇನ್ನು ಈ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಪರ ವಕೀಲರಿಗೆ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿದೆ.
ರೌಡಿಶೀಟರ್ ಬಿಕ್ಲು ಶಿವ ಮರ್ಡರ್ ಕೇಸ್: ಬೈರತಿ ಬಸವರಾಜ್ಗೆ ಬಿಗ್ ರಿಲೀಫ್

