Friday, December 26, 2025

ಮಗ ಬಂದೇ ಬರ್ತಾನೆ ಎಂದು ಕಾಯ್ತಿದ್ದ ತಾಯಿಯ ಹೃದಯ ಒಡೆದೋಯ್ತು! ವಿದ್ಯಾರ್ಥಿ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡಿಸೆಂಬರ್​ 15ರಂದು ಮನೆಯಿಂದ ಸ್ನೇಹಿತನ ಬೈಕ್ ತೆಗೆದುಕೊಂಡು ಹೋದ ವಿದ್ಯಾರ್ಥಿಯೊಬ್ಬ 10 ದಿನಗಳ ಬಳಿಕ ರಸ್ತೆ ಮೋರಿಯಲ್ಲಿ ಶವವಾಗಿಪತ್ತೆಯಾಗಿದ್ದಾನೆ. ಪ್ರೀತಿ ವಿಚಾರಕ್ಕೆ ಯುವತಿ ಕಡೆಯವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಯುವಕನ ಸಾವಿನ ತುಂಬಾ ಅನುಮಾನಗಳಿವೆ.

ವಿದ್ಯಾರ್ಥಿ ನಿಶಾಂಕ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ನಿವಾಸಿಯಾಗಿದ್ದ. ಡಿ.15ರಂದು ಪಕ್ಕದ ಮನೆಯವನ ಬಳಿ ಎನ್ಎಸ್ ಪಲ್ಸರ್ ಬೈಕ್ ಪಡೆದು ಒಂದು ರೌಂಡ್ ಅಂತ ಹೊರಟ್ಟಿದ್ದ. ಆದರೆ ಬೆಳಗ್ಗೆ ಮನೆಯಿಂದ ಹೊರಗಡೆ ಹೋದ ನಿಶಾಂಕ್, ಸುಮಾರು ಗಂಟೆಯಾದರು ವಾಪಸ್ ಬಂದಿಲ್ಲ. ಹೀಗಾಗಿ ಎಲ್ಲೆಡೆ ಹುಡುಕಾಡಿದ ಕುಟುಂಬಸ್ಥರು ಕೊನೆಗೆ ಪೊಲೀಸ್ ಠಾಣೆಗೆ ಮಗನ ನಾಪತ್ತೆ ಬಗ್ಗೆ ದೂರು ನೀಡಿ ಕಾದು ಕುಳಿತಿದ್ದರು.

ಎಷ್ಟು ಹುಡುಕಾಡಿದರೂ ಮನೆಯಿಂದ ಹೊರಗಡೆ ಹೋಗಿದ್ದ ಯುವಕ ವಾಪಸ್ ಬಂದಿಲ್ಲ. ಇಂದು ಬೆಳಗ್ಗೆ ಊರ ಆಚೆ ಶವವಾಗಿ ಪತ್ತೆಯಾಗಿದ್ದಾನೆ. ದೊಡ್ಡಬಳ್ಳಾಫುರ – ಚಿಕ್ಕಬಳ್ಳಾಫುರ ರಸ್ತೆಯ ಕಾಲುವೆಯ ಮೋರಿಯಲ್ಲಿ ಬೈಕ್ ಸಮೇತ ಯುವಕನ ಮೃತದೇಹ ಕಂಡುಬಂದಿದೆ. ಮೃತದೇಹ ಕಂಡ ಸ್ಥಳಿಯರು ತಕ್ಷಣ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪಿಯುಸಿ ಓದುತ್ತಿದ್ದ ನಿಶಾಂಕ್​ ನಿತ್ಯ ಬಸ್​ನಲ್ಲಿ ಚಿಕ್ಕಬಳ್ಳಾಪುರಕ್ಕೆ ಕಾಲೇಜಿಗೆ ಹೋಗಿ ಬರುತ್ತಿದ್ದ. ಇತ್ತೀಚೆಗೆ ಕಾಲೇಜಿಗೆ ಹೋಗುತ್ತಿದ್ದ ಸಹಪಾಠಿ ಜೊತೆ ನಿಶಾಂಕ್​ಗೆ ಪ್ರೀತಿ ಚಿಗುರೊಡೆದಿದ್ದು, ಕಾಲೇಜು ಬಳಿ ಹುಡುಗಿ ಕಡೆಯವರು ವಾರ್ನಿಂಗ್ ನೀಡಿದ್ದರು ಎನ್ನಲಾಗಿದೆ.

ಅಲ್ಲದೆ ನಿಶಾಂಕ್ ನಾಪತ್ತೆಯಾದ ಹಿಂದಿನ ದಿನ ಹುಡುಗಿ ಜೊತೆಯಾಗಿರುವ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಾಕಿ ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಸಹ ಕೋರಿದ್ದನಂತೆ. ಹೀಗಾಗಿ ಹುಡುಗಿ ಮನೆ ಕಡೆಯವರೆ ನಮ್ಮ ಹುಡುಗನನ್ನ ಕೊಲೆ ಮಾಡಿರಬಹುದು ಅಂತ ಮೃತನ ಮನೆಯವರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ನಾಪತ್ತೆಯಾದ 10 ದಿನಗಳ ಬಳಿಕ ನಿಶಾಂಕ್ ನನ್ನ ಕೊಲೆ ಮಾಡಿ ತಂದು ಮೋರಿ ಕೆಳಗಡೆ ಬಿಸಾಡಿದ್ದು, ಇದು ಅಪಘಾತವಲ್ಲ ಕೊಲೆ ಅಂತ ನಿಶಾಂಕ್ ಮನೆಯವರು ಶಂಕೆ ವ್ಯಕ್ತಪಡಿಸಿದ್ದಾರೆ.

error: Content is protected !!