Saturday, December 27, 2025

ಸತ್ಯ ತಿಳಿಯದೇ ಮಾತನಾಡಬೇಡಿ: ಪಿಣರಾಯಿ ವಿಜಯನ್ ಟೀಕೆಗೆ ಡಿಕೆಶಿ ಕೌಂಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಉತ್ತರದ ಕೋಗಿಲು ಲೇಔಟ್‌ನಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ‘ಬುಲ್ಡೋಜರ್ ರಾಜ್’ ಎಂದು ಕರೆದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಪಿಣರಾಯಿ ವಿಜಯನ್ ಅವರು ಹಿರಿಯ ನಾಯಕರು, ಆದರೆ ಸ್ಥಳೀಯ ವಾಸ್ತವಗಳನ್ನು ಅರಿಯದೆ ಸುಮ್ಮನೆ ಪ್ರತಿಕ್ರಿಯಿಸುವುದು ಸರಿಯಲ್ಲ,” ಎಂದು ಅವರು ಹೇಳಿದ್ದಾರೆ.

ಕೋಗಿಲು ಲೇಔಟ್ ಬಳಿಯ ಸುಮಾರು 5 ಎಕರೆ ಸರ್ಕಾರಿ ಜಾಗವನ್ನು ಕಸ ವಿಲೇವಾರಿ ಉದ್ದೇಶಕ್ಕಾಗಿ ಮೀಸಲಿಡಲಾಗಿತ್ತು. ಈ ಜಾಗದಲ್ಲಿ ಕೆಲವರು ಕಾನೂನುಬಾಹಿರವಾಗಿ ಮನೆಗಳನ್ನು ನಿರ್ಮಿಸಿಕೊಂಡು ಒತ್ತುವರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕಾನೂನುಬದ್ಧವಾಗಿಯೇ ತೆರವು ಕಾರ್ಯಾಚರಣೆ ನಡೆಸಿದೆಯೇ ಹೊರತು, ಇದರಲ್ಲಿ ಯಾವುದೇ ರಾಜಕೀಯ ಸೇಡಿನ ಕ್ರಮವಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

“ನಾವು ಬುಲ್ಡೋಜರ್ ಸಂಸ್ಕೃತಿಯನ್ನು ಪಾಲಿಸುವವರಲ್ಲ. ಕಾನೂನು ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ನಮ್ಮ ಪಕ್ಷದ ಹೈಕಮಾಂಡ್ ನಾಯಕರಿಗೂ ಮಾಹಿತಿ ನೀಡಲಾಗಿದೆ,” ಎಂದು ಅವರು ತಿಳಿಸಿದರು.

ಮನೆ ಕಳೆದುಕೊಂಡವರಿಗೆ ಸರ್ಕಾರ ಅನ್ಯಾಯ ಮಾಡಿಲ್ಲ. ಅವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಚುನಾವಣೆಗಳು ಹತ್ತಿರ ಬರುತ್ತಿರುವಾಗ ಇಂತಹ ಹೇಳಿಕೆಗಳನ್ನು ನೀಡುವುದು ಕೇವಲ ರಾಜಕೀಯ ಗಿಮಿಕ್ ಆಗಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

“ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಅಥವಾ ಅಕ್ರಮವಾಗಿ ಸ್ಲಂಗಳನ್ನು ನಿರ್ಮಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಸತ್ಯ ತಿಳಿದುಕೊಂಡು ಮಾತನಾಡುವುದು ಹಿರಿಯ ನಾಯಕರಿಗೆ ಶೋಭೆ ತರುತ್ತದೆ,” ಎನ್ನುವ ಮೂಲಕ ಕೇರಳ ಸಿಎಂಗೆ ಡಿಕೆಶಿ ನೇರ ಎಚ್ಚರಿಕೆ ನೀಡಿದ್ದಾರೆ.

error: Content is protected !!