ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾರುಕಟ್ಟೆ ಎಂದರೆ ಹಾಲಿವುಡ್ ಪಾಲಿಗೆ ಅಕ್ಷಯ ಪಾತ್ರೆ ಎಂದೇ ನಂಬಲಾಗಿತ್ತು. ಇಲ್ಲಿನ ಪ್ರೇಕ್ಷಕರನ್ನು ಸೆಳೆಯಲು ಕೋಟಿ ಕೋಟಿ ಖರ್ಚು ಮಾಡಿ ಪ್ರಚಾರ ಮಾಡುವುದು, ಭಾರತೀಯರಿಗಾಗಿಯೇ ವಿಶೇಷ ಬದಲಾವಣೆ ಮಾಡುವುದು ಸಾಮಾನ್ಯ ಎಂಬಂತಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳು ಹಾಲಿವುಡ್ ನಿರ್ಮಾಪಕರ ನಿದ್ದೆಗೆಡಿಸಿವೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಎರಡು ಬಹುದೊಡ್ಡ ಸಿನಿಮಾಗಳು ಭಾರತದಲ್ಲಿ ನೆಲಕಚ್ಚಿವೆ.
ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ ‘ಅವತಾರ್’ ಲೋಕಕ್ಕೆ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಕಳೆದ ವಾರ ಬಿಡುಗಡೆಯಾದ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಬಾಕ್ಸ್ ಆಫೀಸ್ ಧೂಳೀಪಟ ಮಾಡಲಿದೆ ಎಂದೇ ಭಾವಿಸಲಾಗಿತ್ತು. ಸಿನಿಮಾ ಇದುವರೆಗೆ ಭಾರತದಲ್ಲಿ ಸುಮಾರು 100 ಕೋಟಿ ರೂಪಾಯಿ ಗಳಿಸಿದೆ ನಿಜ. ಆದರೆ, ಹಿಂದಿನ ಭಾಗಗಳು ಸೃಷ್ಟಿಸಿದ್ದ ದಾಖಲೆಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಗಳಿಕೆ ಎಂದು ವಿಶ್ಲೇಷಿಸಲಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಲು ಈ ಸಿನಿಮಾ ವಿಫಲವಾಗಿದೆ.
‘ಅವತಾರ್’ ಬೆನ್ನಲ್ಲೇ ಈಗ ಜನಪ್ರಿಯ ‘ಅನಕೊಂಡ’ ಸಿನಿಮಾ ಸರಣಿಗೂ ಭಾರತೀಯರು ತಣ್ಣನೆಯ ಪ್ರತಿಕ್ರಿಯೆ ನೀಡಿದ್ದಾರೆ.
ದಿನ 1: ಕೇವಲ 1.50 ಕೋಟಿ ರೂಪಾಯಿ ಗಳಿಕೆ.
ದಿನ 2: ಒಂದು ಕೋಟಿ ರೂಪಾಯಿ ಗಳಿಸುವಲ್ಲಿಯೂ ಸಿನಿಮಾ ವಿಫಲ.
ಪೌಲ್ ರುಡ್ ಮತ್ತು ಜಾಕ್ ಬ್ಲಾಕ್ ಅವರಂತಹ ಘಟಾನುಘಟಿ ಕಲಾವಿದರಿದ್ದರೂ, ಕಾಮಿಡಿ ಮತ್ತು ಥ್ರಿಲ್ಲರ್ ಸಮ್ಮಿಶ್ರಣದ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತಿದೆ. ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ, ಜಾಗತಿಕ ಮಟ್ಟದಲ್ಲೂ ಕೇವಲ 80 ಕೋಟಿ ರೂಪಾಯಿ ಗಳಿಸಿರುವುದು ನಿರ್ಮಾಪಕರಿಗೆ ದೊಡ್ಡ ಆಘಾತ ನೀಡಿದೆ.

