ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಡೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಯೋಜನೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಪಕ್ಷ, ಇದರ ವಿರುದ್ಧ ದೇಶಾದ್ಯಂತ ಹೋರಾಟ ಆರಂಭಿಸುವ ನಿರ್ಧಾರ ಕೈಗೊಂಡಿದೆ. ಜನವರಿ 5ರಿಂದ ಎಲ್ಲ ರಾಜ್ಯಗಳಲ್ಲಿ ಹೋರಾಟ ನಡೆಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ.
ದೆಹಲಿಯ ಇಂದಿರಾ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಖರ್ಗೆ, ನರೇಗಾ ಕೇವಲ ಉದ್ಯೋಗ ಯೋಜನೆ ಅಲ್ಲ, ಗ್ರಾಮೀಣ ಜನತೆಗೆ ಸಂವಿಧಾನ ನೀಡಿರುವ ಕೆಲಸದ ಹಕ್ಕು ಎಂದು ಹೇಳಿದರು. ಈ ಯೋಜನೆಗೆ ಧಕ್ಕೆಯುಂಟು ಮಾಡುವುದು ಬಡವರು, ಕೂಲಿ ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಜೀವನಾಧಾರಕ್ಕೆ ನೇರ ಪೆಟ್ಟು ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ:
ನರೇಗಾ ಕಾಯ್ದೆಯನ್ನು ರಕ್ಷಿಸುವುದು ಕಾಂಗ್ರೆಸ್‌ನ ರಾಜಕೀಯ ಹಾಗೂ ನೈತಿಕ ಹೊಣೆಗಾರಿಕೆ. ಈ ವಿಚಾರದಲ್ಲಿ ಪಕ್ಷ ಮೌನವಾಗಿರುವುದಿಲ್ಲ. ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಜನರ ಬೆಂಬಲದೊಂದಿಗೆ ಹೋರಾಟ ಮುಂದುವರಿಸಲಾಗುವುದು ಎಂದು ಖರ್ಗೆ ಸ್ಪಷ್ಟಪಡಿಸಿದರು. ಅವರ ಅಭಿಪ್ರಾಯಕ್ಕೆ ರಾಹುಲ್ ಗಾಂಧಿ ಸಹ ಬೆಂಬಲ ಸೂಚಿಸಿದರು.
ಸಭೆಯಲ್ಲಿ ಮುಂಬರುವ ಐದು ರಾಜ್ಯಗಳ ಚುನಾವಣೆಗಳು, ವೋಟ್ ಚೋರಿ ಆರೋಪಗಳು ಸೇರಿದಂತೆ ಹಲವು ಪ್ರಮುಖ ರಾಜಕೀಯ ವಿಷಯಗಳ ಮೇಲೂ ಚರ್ಚೆ ನಡೆಯಿತು. ಸಭೆಗೆ ಸೋನಿಯಾ ಗಾಂಧಿ, ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.

