ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಮಧ್ಯಪಶ್ಚಿಮ ಭಾಗ ಹಾಗೂ ನ್ಯೂಯಾರ್ಕ್‌ನಲ್ಲಿ ತೀವ್ರ ಹಿಮಪಾತ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಹಿಮಗಾಳಿ ಮತ್ತು ತೀವ್ರ ಚಳಿಯಿಂದಾಗಿ ತಾಪಮಾನ ತೀವ್ರವಾಗಿ ಕುಸಿದಿದ್ದು, ನ್ಯೂಯಾರ್ಕ್ ನಗರದ ಹಲವು ಪ್ರದೇಶಗಳು ಮಂಜಿನಗಡ್ಡೆಗಳಾಗಿ ಪರಿವರ್ತನೆಯಾಗಿವೆ. ಕೆಲ ಕಡೆ ಕುಡಿಯುವ ನೀರಿನ ಪೈಪ್‌ಗಳು ಕೂಡ ಗಟ್ಟಿ ಹಿಮದಿಂದ ಮುಚ್ಚಿಕೊಂಡಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಮಪಾತದ ಪರಿಣಾಮವಾಗಿ ವಾಯು ಸಂಚಾರದ ಮೇಲೆ ಭಾರೀ ಪರಿಣಾಮ ಬಿದ್ದಿದೆ. ಅಮೆರಿಕಾದಾದ್ಯಂತ ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಹೊರಟಿದ್ದ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ನ್ಯೂಯಾರ್ಕ್‌ನಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ 10 ಇಂಚುಗಳಷ್ಟು ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ತಾಪಮಾನ ಶೂನ್ಯ ಡಿಗ್ರಿಗೂ ಕೆಳಗೆ ಇಳಿಯುವ ಮುನ್ಸೂಚನೆ ನೀಡಲಾಗಿದ್ದು, ಜನರು ಅನಗತ್ಯವಾಗಿ ಹೊರಗೆ ಸಂಚರಿಸದಂತೆ ಎಚ್ಚರಿಕೆ ನೀಡಲಾಗಿದೆ.
ತುರ್ತು ಸೇವೆಗಳು ಸಜ್ಜಾಗಿದ್ದು, ರಸ್ತೆ ಸಂಚಾರ ಸುಗಮವಾಗಿಸಲು ಹಿಮ ತೆರವು ಕಾರ್ಯಾಚರಣೆ ಮುಂದುವರಿದಿದೆ. ಚಳಿ ಅಲೆ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಅಧಿಕಾರಿಗಳು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

