ಹೊಸದಿಗಂತ ಡಿಜಿಟಲ್ ಡೆಸ್ಕ್:
2025–26ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಮೂರನೇ ಪಂದ್ಯ ಆರಂಭಕ್ಕೂ ಮುನ್ನವೇ ಹೃದಯವಿದ್ರಾವಕ ಘಟನೆ ನಡೆದಿದೆ. ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಢಾಕಾ ಕ್ಯಾಪಿಟಲ್ಸ್ ಮತ್ತು ರಾಜ್‌ಶಾಹಿ ರಾಯಲ್ಸ್ ನಡುವಿನ ಪಂದ್ಯಕ್ಕೆ ಮುನ್ನ, ಢಾಕಾ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮಹಬೂಬ್ ಅಲಿ ಝಾಕಿ ಹಠಾತ್ತನೆ ಅಸ್ವಸ್ಥರಾಗಿ ಮೈದಾನದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಪಂದ್ಯಪೂರ್ವ ಅಭ್ಯಾಸದ ವೇಳೆ ಈ ಘಟನೆ ನಡೆದಿದ್ದು, ಕೂಡಲೇ ವೈದ್ಯಕೀಯ ಸಿಬ್ಬಂದಿ ಸಿಪಿಆರ್ ನೀಡಿ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದರು. ಪ್ರಾಥಮಿಕವಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಫ್ರಾಂಚೈಸಿ ತಿಳಿಸಿದ್ದರೂ, ಸ್ವಲ್ಪ ಸಮಯದ ಬಳಿಕ ಝಾಕಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು ಎಂದು ಅಧಿಕೃತವಾಗಿ ಘೋಷಿಸಲಾಯಿತು.
59 ವರ್ಷದ ಮಹಬೂಬ್ ಅಲಿ ಝಾಕಿ ಬಾಂಗ್ಲಾದೇಶ ಕ್ರಿಕೆಟ್‌ಗೆ ಮಹತ್ವದ ಸೇವೆ ಸಲ್ಲಿಸಿದ್ದರು. 2020ರ ಐಸಿಸಿ ಅಂಡರ್-19 ವಿಶ್ವಕಪ್ ವಿಜೇತ ಬಾಂಗ್ಲಾದೇಶ ತಂಡದ ತರಬೇತಿ ಬಳಗದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

