Saturday, December 27, 2025

ಹಸಿ ಗಂಧದ ಮರದ ತುಂಡು ಸಾಗಾಟ: ಮಾಲು ಸಹಿತ ವಾಹನ ವಶಪಡಿಸಿಕೊಂಡ ಅಧಿಕಾರಿಗಳು

ಹೊಸದಿಗಂತ ವರದಿ ಉತ್ತರ ಕನ್ನಡ:

ಹಸಿ ಗಂಧದ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿ ಮಾಲು ಸಹಿತ ವಾಹನವನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕುಳಗಿ ವನ್ಯಜೀವಿ ವಲಯದ ಕೇಗದಾಳ ಶಾಖೆಯ ಕಲಬಾವಿ ಗಸ್ತಿನಲ್ಲಿ ಶನಿವಾರ ನಡೆದಿದೆ.

ಶನಿವಾರ ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ವಿಭಾಗದ ಕುಳಗಿ ವನ್ಯಜೀವಿ ವಲಯದ ಕೇಗದಾಳ ಶಾಖೆಯ ಕಲಬಾವಿ ಗಸ್ತಿನಲ್ಲಿ ಶ್ರೀಗಂಧದ ಮರವನ್ನು ಕಟಾವಣೆ ಮಾಡಿ ಸಾಗಾಟ ಮಾಡುವ ಉದ್ದೇಶದೊಂದಿಗೆ ಆಗಮಿಸಿದ್ದ ಕಳ್ಳರನ್ನು ಹಿಡಿಯುವ ಸಂದರ್ಭದಲ್ಲಿ ಕಳ್ಳರು ಪರಾರಿಯಾಗಿದ್ದಾರೆ.

ಆರೋಪಿತರ ಪತ್ತೆಗಾಗಿ ಶ್ವಾನದಳ ಹಾಗೂ ವಿಧಿ ವಿಜ್ಞಾನ ತಂಡದವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಂದು ಮಾರುತಿ ವಾಹನ ಹಾಗೂ ಹಸಿ ಶ್ರೀಗಂಧ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಮೊಕದ್ದಮೆಯನ್ನು ದಾಖಲಿಸಲಾಗಿದೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಲೇಶ್ ಶಿಂದೆ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ ಮಾರ್ಗದರ್ಶನದಂತೆ ಕುಳಗಿ ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ಸಾಗರ ಶಶಿಧರ ಬೋಗೂರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಳಗಿ ವಲಯದ ಸಿಬ್ಬಂದಿಗಳಾದ ಪಕೀರೇಶ ಸುಣಗಾರ, ಕುಮಾರ ನಾಯಕ, ಉಮೇಶ ಗಾಂವಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!