ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಾದಚಾರಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.
ಮೃತರನ್ನು ಸಿಂಗೇನ ಅಗ್ರಹಾರ ನಿವಾಸಿ ನಾರಾಯಣಸ್ವಾಮಿ ಎಂದು ಗುರುತಿಸಲಾಗಿದೆ. ಸಂಜೆ ಸುಮಾರು 7 ಗಂಟೆ ವೇಳೆಗೆ ಅವರು ತಮ್ಮ ದಿನನಿತ್ಯದ ಕೆಲಸ ಮುಗಿಸಿಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ನಿಯಂತ್ರಣ ತಪ್ಪಿದ ಸಿಮೆಂಟ್ ಮಿಕ್ಸರ್ ಲಾರಿ ಅಪ್ಪಳಿಸಿದೆ. ಡಿಕ್ಕಿಯ ತೀವ್ರತೆಗೆ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:
ಅಪಘಾತದ ನಂತರ ಲಾರಿ ಚಾಲಕ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಪೂರ್ಣ ಘಟನೆ ರಸ್ತೆ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

