ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲ ಮಿತಿಮೀರಿದ್ದು, ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಕರ್ನಾಟಕವು ‘ಉಡ್ತಾ ಕರ್ನಾಟಕ’ವಾಗಿ ಬದಲಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆಯ ಕುಸಿತದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು.
“ಮಹಾರಾಷ್ಟ್ರ ಪೊಲೀಸರು ಕರ್ನಾಟಕಕ್ಕೆ ಬಂದು ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದರೆ, ನಮ್ಮ ರಾಜ್ಯದ ಪೊಲೀಸರು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ,” ಎಂದು ಬೊಮ್ಮಾಯಿ ಪ್ರಶ್ನಿಸಿದರು. ಹಾವೇರಿ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲೂ ಡ್ರಗ್ಸ್ ಮುಕ್ತವಾಗಿ ಮಾರಾಟವಾಗುತ್ತಿದ್ದರೂ, ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ವಿಶೇಷ ಕಾನೂನುಗಳಿದ್ದರೂ ಅವುಗಳ ಬಳಕೆ ಆಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ವರ್ಗಾವಣೆ ಹಾಗೂ ಆಂತರಿಕ ಕಚ್ಚಾಟದಲ್ಲಿ ಮುಳುಗಿದೆ. ದ್ವೇಷ ಭಾಷಣದ ವಿರುದ್ಧ ಕಾನೂನು ತರಲು ಉತ್ಸಾಹ ತೋರುವ ಸರ್ಕಾರಕ್ಕೆ, ರೈತರ ಗೊಬ್ಬರ ಕಳ್ಳತನ ಮಾಡುವವರು, ಕಳ್ಳಭಟ್ಟಿ ದಾರರು ಮತ್ತು ಡ್ರಗ್ ಮಾಫಿಯಾದವರನ್ನು ಮಟ್ಟಹಾಕಲು ಆಸಕ್ತಿ ಇಲ್ಲ. ಡ್ರಗ್ಸ್ ಮಾರಾಟವಾಗುವ ವ್ಯಾಪ್ತಿಯ ಅಧಿಕಾರಿಗಳನ್ನು ತಕ್ಷಣ ಬದಲಾಯಿಸಬೇಕು ಮತ್ತು ಕಠಿಣ ಸ್ಕ್ವಾಡ್‌ಗಳ ಮೂಲಕ ಆರೋಪಿಗಳನ್ನು ಜೈಲಿಗಟ್ಟಬೇಕು ಎಂದು ಆಗ್ರಹಿಸಿದರು.

