ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸುವ ಘಟನೆಯೊಂದು ಇಂದು ಸಿಂಗಸಂದ್ರದಲ್ಲಿ ನಡೆದಿದೆ. ಅತ್ತಿಬೆಲೆಯಿಂದ ಮೆಜೆಸ್ಟಿಕ್ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್‌ನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಓರ್ವ ಪ್ರಯಾಣಿಕ ಗಾಯಗೊಂಡಿದ್ದು, ಬಸ್‌ನ ಒಳಭಾಗಕ್ಕೆ ಹಾನಿಯಾಗಿದೆ.
ಪ್ರಯಾಣಿಕರಿಂದ ತುಂಬಿದ್ದ ಬಿಎಂಟಿಸಿ ಬಸ್ ವೇಗವಾಗಿ ಸಾಗುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಟೈರ್ ಮೇಲ್ಭಾಗದ ಸೀಟುಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಬಸ್‌ನ ತಳಭಾಗ ಛಿದ್ರಗೊಂಡಿದ್ದು, ಕ್ಷಣಾರ್ಧದಲ್ಲಿ ಬಸ್ ತುಂಬಾ ಧೂಳು ಮತ್ತು ಹೊಗೆ ಆವರಿಸಿಕೊಂಡಿತು.
ಟೈರ್ ಸ್ಫೋಟದ ಭೀಕರ ಶಬ್ದಕ್ಕೆ ಪ್ರಯಾಣಿಕರು ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಬಾಂಬ್ ಸ್ಫೋಟವಾಯಿತೆಂದು ಭಾವಿಸಿ ಕೆಲಕಾಲ ಆತಂಕಕ್ಕೊಳಗಾದರು. ಅದೃಷ್ಟವಶಾತ್, ಸೀಟುಗಳು ಕಿತ್ತುಬಂದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡ ಪ್ರಯಾಣಿಕನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನ ವೇಗ ತಗ್ಗಿದ ಸಮಯದಲ್ಲಿ ಘಟನೆ ನಡೆದಿದ್ದರಿಂದ ದೊಡ್ಡ ಮಟ್ಟದ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಬಿಎಂಟಿಸಿ ಬಸ್‌ಗಳ ಸರಿಯಾದ ನಿರ್ವಹಣೆ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಸ್ಥಳೀಯರು ಮತ್ತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

