ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ರೈಲು ಸುರಕ್ಷತೆ ಕುರಿತು ಮತ್ತೊಮ್ಮೆ ಆತಂಕ ಮೂಡಿಸುವ ಘಟನೆಯೊಂದು ವರದಿಯಾಗಿವೆ. ಆಂಧ್ರಪ್ರದೇಶದಲ್ಲಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಬ್ಬ ಪ್ರಯಾಣಿಕ ಮೃತಪಟ್ಟ ಘಟನೆ ನಡೆದಿದೆ.
ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಎಲಮಂಚಿಲಿ ಸಮೀಪ ಇಂದು ಮುಂಜಾನೆ ಟಾಟಾ–ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ರೈಲು ಸಂಖ್ಯೆ 18189ರ ಪ್ಯಾಂಟ್ರಿ ಕಾರ್ ಪಕ್ಕದಲ್ಲಿದ್ದ B1 ಮತ್ತು M2 ಎಸಿ ಕೋಚ್‌ಗಳು ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟುಹೋದವು. ಬೆಳಿಗ್ಗೆ ಸುಮಾರು 1.30ರ ವೇಳೆಗೆ ಹೊಗೆ ಕಾಣಿಸಿಕೊಂಡ ತಕ್ಷಣ ಲೋಕೊ ಪೈಲಟ್ ರೈಲನ್ನು ನಿಲ್ಲಿಸಿದರೂ, ಆಗಾಗಲೇ ಬೆಂಕಿ ವ್ಯಾಪಿಸಿತ್ತು.
ಘಟನೆಯ ವೇಳೆ ಬೋಗಿಗಳೊಳಗೆ ದಟ್ಟ ಹೊಗೆ ಆವರಿಸಿದ್ದು, ಪ್ರಯಾಣಿಕರು ಆತಂಕದಿಂದ ಹೊರಗೆ ಧಾವಿಸಿದ್ದಾರೆ. ಈ ಅವಘಡದಲ್ಲಿ ವಿಜಯವಾಡದ 70 ವರ್ಷದ ಚಂದ್ರಶೇಖರ್ ಸುಂದರ್ ಎಂಬ ಪ್ರಯಾಣಿಕ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದರು. ಸುಟ್ಟ ಬೋಗಿಗಳನ್ನು ಬೇರ್ಪಡಿಸಿ ಹೊಸ ಬೋಗಿಗಳನ್ನು ಜೋಡಿಸಿದ ಬಳಿಕ ರೈಲು ತನ್ನ ಪ್ರಯಾಣವನ್ನು ಮುಂದುವರಿಸಿದೆ.
ಈ ಘಟನೆ ವಿಶಾಖಪಟ್ಟಣಂ–ವಿಜಯವಾಡ ಮಾರ್ಗದ ಸಂಚಾರದ ಮೇಲೂ ಪರಿಣಾಮ ಬೀರಿದ್ದು, ಹಲವಾರು ರೈಲುಗಳು ವಿಳಂಬಗೊಂಡಿವೆ. ಬೆಂಕಿಯ ನಿಖರ ಕಾರಣ ಪತ್ತೆಹಚ್ಚಲು ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

