ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ನೋಯ್ಡಾದಲ್ಲಿ ಅಪರಿಚಿತ ಯುವತಿಯ ಶವ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ. ನಗರದ ಡಂಪಿಂಗ್ ಯಾರ್ಡ್ ಸಮೀಪದ ಕಸದ ರಾಶಿಯೊಳಗೆ ಚೀಲವೊಂದರಲ್ಲಿ ಯುವತಿಯಯ ಮೃತದೇಹ ಪತ್ತೆಯಾಗಿದ್ದು, ಕೈಕಾಲುಗಳನ್ನು ಕಟ್ಟಿರುವುದು ಹಾಗೂ ಮುಖದಲ್ಲಿ ಸುಟ್ಟ ಗುರುತುಗಳು ಕಂಡುಬಂದಿವೆ. ಇದು ಕೊಲೆ ಪ್ರಕರಣವಾಗಿರುವ ಶಂಕೆಯನ್ನು ಪೊಲೀಸರು ವ್ಯಕತಪಡಿಸಿದ್ದಾರೆ.
ಸ್ಥಳೀಯರು ಕಸದ ತೊಟ್ಟಿಯ ಬಳಿ ಅನುಮಾನಾಸ್ಪದ ಚೀಲ ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು. ಬಳಿಕ ವಿಧಿವಿಜ್ಞಾನ ತಜ್ಞರು ಮತ್ತು ಹಿರಿಯ ಅಧಿಕಾರಿಗಳನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸರ ಪ್ರಾಥಮಿಕ ಅಂದಾಜು ಪ್ರಕಾರ, ಮೃತ ಯುವತಿ ಸುಮಾರು 22 ರಿಂದ 25 ವರ್ಷದವರಾಗಿರಬಹುದು ಎಂದು ಹೇಳಲಾಗಿದೆ. ಆದರೆ ಆಕೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಶವವನ್ನು ಎಲ್ಲಿಂದ ತರಲಾಗಿದೆ ಮತ್ತು ಯಾವ ಸಮಯದಲ್ಲಿ ಡಂಪಿಂಗ್ ಯಾರ್ಡ್‌ಗೆ ಎಸೆದಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

