ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಸಮೀಪದ ವಿರಾರ್‌ನಲ್ಲಿ ನಡೆದ ಗೃಹಹಿಂಸೆಯೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯನ್ನು ಹತ್ಯೆ ಮಾಡಿ ಅದನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತಿ ಜಯಂತಿಲಾಲ್ ಸೋನಿ ಹಾಗೂ ಆತನ ತಂಗಿ ದಿವಾಲಿಲಾಲ್ ಸೋನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಕಲ್ಪನಾ ಸೋನಿ (36) ಎಂದು ಗುರುತಿಸಲಾಗಿದೆ.
ಪೊಲೀಸ್ ತನಿಖೆಯ ಪ್ರಕಾರ, ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಕಲ್ಪನಾಳಿಗೆ ಅತ್ತೆ-ಮಾವರಿಂದಲೂ ಕಿರುಕುಳ ಎದುರಾಗುತ್ತಿತ್ತು. ದೇವಸ್ಥಾನಕ್ಕೆ ತೆರಳಲು ಸಿದ್ಧವಾಗುತ್ತಿದ್ದ ವೇಳೆ ಸ್ನಾನಗೃಹದಲ್ಲಿ ಜಾರಿ ಬಿದ್ದಿದ್ದಾಳೆ ಎಂದು ಆರೋಪಿಗಳು ನೆರೆಹೊರೆಯವರಿಗೆ ತಿಳಿಸಿದ್ದರು. ರಕ್ತಸ್ರಾವವಾಗುತ್ತಿದೆ ಎಂದು ಹೇಳಿ ನೆರೆಯವರ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.
ಇದನ್ನೂ ಓದಿ:
ಮೃತದೇಹದ ಮೇಲೆ ಅನೇಕ ಗಾಯದ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕಲ್ಪನಾಳ ಸಾವು ಅಸಹಜವಾಗಿದೆ ಎಂಬುದು ದೃಢಪಟ್ಟಿದೆ. ಇದಾದ ಬಳಿಕ ನಡೆದ ವಿಚಾರಣೆಯಲ್ಲಿ ಪತಿ ಮತ್ತು ತಂಗಿ ಕೊಲೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಬೊಲಿಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

