Monday, December 29, 2025

ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು: 13 ಜನರ ದಾರುಣ ಸಾವು, ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಕ್ಸಿಕೋದ ದಕ್ಷಿಣ ಭಾಗದಲ್ಲಿ ಸಂಚರಿಸುತ್ತಿದ್ದ ಇಂಟರ್ ಓಷಿಯಾನಿಕ್ ರೈಲು ಹಳಿ ತಪ್ಪಿದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಇನ್ನೂ 98 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಮೆಕ್ಸಿಕೋ ಅಧ್ಯಕ್ಷೆ ಕ್ಲಾಡಿಯಾ ಶೇನ್‌ಬಾಮ್ ತಿಳಿಸಿದ್ದಾರೆ.

ಪೆಸಿಫಿಕ್ ಮಹಾಸಾಗರವನ್ನು ಗಲ್ಫ್ ಆಫ್ ಮೆಕ್ಸಿಕೋಗೆ ಸಂಪರ್ಕಿಸುವ ರೈಲು ಮಾರ್ಗದಲ್ಲಿ ಈ ಘಟನೆ ನಡೆದಿದೆ. ಓಹಾಕ್ಸಾ ಮತ್ತು ವೆರಾಕ್ರೂಜ್ ರಾಜ್ಯಗಳನ್ನು ಸಂಪರ್ಕಿಸುವ ಇಂಟರೊಶನಿಕ್ ರೈಲು ನಿಜಾಂಡಾ ಪಟ್ಟಣದ ಸಮೀಪದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಹಳಿಯಿಂದ ಹೊರಬಿದ್ದಿದೆ. ಅಪಘಾತದ ಬಳಿಕ ಈ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಅಪಘಾತದ ಸಮಯದಲ್ಲಿ ರೈಲಿನಲ್ಲಿ 241 ಪ್ರಯಾಣಿಕರು ಹಾಗೂ 9 ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!