Monday, December 29, 2025

ವಿಜಯ ಹಝಾರೆ ಟೂರ್ನಿಯಲ್ಲಿ ಮತ್ತೆ ಕೊಹ್ಲಿ ದರುಶನ: ನ್ಯೂಝಿಲೆಂಡ್ ಸರಣಿಗೂ ಮುನ್ನ ಮತ್ತೊಂದು ಪಂದ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಮೊದಲು ವಿರಾಟ್ ಕೊಹ್ಲಿ ದೇಶೀಯ ಮೈದಾನದಲ್ಲೇ ತನ್ನ ತಯಾರಿಯನ್ನು ಇನ್ನಷ್ಟು ತೀಕ್ಷ್ಣಗೊಳಿಸಲು ಮುಂದಾಗಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ, ವಿಜಯ ಹಝಾರೆ ಟ್ರೋಫಿಯಲ್ಲಿ ಮತ್ತೊಂದು ಪಂದ್ಯ ಆಡುವ ನಿರ್ಧಾರವನ್ನು ಕೊಹ್ಲಿ ಕೈಗೊಂಡಿದ್ದಾರೆ. ಜನವರಿ 6ರಂದು ಬೆಂಗಳೂರಿನ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯಲಿರುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಅವರು ದೆಹಲಿ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ ಎಂದು ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.

ಈಗಾಗಲೇ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಆಡಿರುವ ಕೊಹ್ಲಿ, ಮೊದಲ ಪಂದ್ಯದಲ್ಲಿ ಆಂಧ್ರ ಪ್ರದೇಶ ವಿರುದ್ಧ ಭರ್ಜರಿ ಶತಕ ಬಾರಿಸಿ ಫಾರ್ಮ್‌ ತೋರಿಸಿದ್ದರು. ನಂತರ ಗುಜರಾತ್ ವಿರುದ್ಧದ ಪಂದ್ಯದಲ್ಲಿ 77 ರನ್‌ಗಳ ಮಹತ್ವದ ಇನಿಂಗ್ಸ್ ಆಡಿದ್ದರು. ಉತ್ತಮ ಲಯದಲ್ಲಿರುವ ಅವರು ಮತ್ತೊಮ್ಮೆ ಬ್ಯಾಟ್ ಬೀಸಲಿರುವುದು ತಂಡಕ್ಕೆ ಆತ್ಮವಿಶ್ವಾಸ ನೀಡಲಿದೆ.

ರೈಲ್ವೇಸ್ ವಿರುದ್ಧದ ಪಂದ್ಯ ಮುಗಿದ ತಕ್ಷಣ ಕೊಹ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ. ಭಾರತ–ನ್ಯೂಝಿಲೆಂಡ್ ನಡುವಿನ ಏಕದಿನ ಸರಣಿ ಜನವರಿ 11ರಿಂದ ಆರಂಭವಾಗಲಿದ್ದು, ಆಟಗಾರರು ಜನವರಿ 7ರಂದು ಬರೋಡಾದಲ್ಲಿ ಸೇರಿಕೊಳ್ಳುವ ನಿರೀಕ್ಷೆಯಿದೆ.

error: Content is protected !!