ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷ 2026ರ ಸಂಭ್ರಮಕ್ಕೆ ಬೆಂಗಳೂರು ನಗರ ಸಿದ್ಧವಾಗುತ್ತಿದ್ದು, ಭದ್ರತೆ ಹಾಗೂ ಸಂಚಾರ ನಿಯಂತ್ರಣಕ್ಕೆ ನಗರ ಪೊಲೀಸ್ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಡಿಸೆಂಬರ್ 31ರ ಸಂಜೆಯಿಂದ ಜನವರಿ 1ರ ಬೆಳಗಿನವರೆಗೆ ನಗರ ಹೃದಯಭಾಗದಲ್ಲಿ ವಾಹನ ಸಂಚಾರ, ಪಾರ್ಕಿಂಗ್ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.
ಜನಸಂದಣಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆಯೇ ಈ ನಿರ್ಬಂಧಗಳ ಮುಖ್ಯ ಉದ್ದೇಶವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 31ರ ರಾತ್ರಿ 8ರಿಂದ ಜನವರಿ 1ರ ಮಧ್ಯರಾತ್ರಿ 2ರವರೆಗೆ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರೆ ಎಲ್ಲ ವಾಹನಗಳ ಸಂಚಾರವನ್ನು ಎಂ.ಜಿ ರಸ್ತೆ (ಅನಿಲ್ ಕುಂಬ್ಳೆ ವೃತ್ತ–ಮೆಯೋ ಹಾಲ್ ಜಂಕ್ಷನ್), ಬ್ರಿಗೇಡ್ ರಸ್ತೆ (ಕಾವೇರಿ ಎಂಪೋರಿಯಂ–ಓಪೆರಾ ಜಂಕ್ಷನ್), ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ ಹಾಗೂ ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ನಿಷೇಧಿಸಲಾಗಿದೆ.
ನಿರ್ಬಂಧಿತ ರಸ್ತೆಗಳ ಬದಲಿಗೆ ಹಲಸೂರು, ಟ್ರಿನಿಟಿ, ಕಬ್ಬನ್ ರಸ್ತೆ, ಡಿಕನ್ಸನ್ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್ ಮೂಲಕ ಸಂಚರಿಸಲು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಬ್ರಿಗೇಡ್ ರಸ್ತೆಯಲ್ಲಿ ಪಾದಚಾರಿಗಳು ಎಂ.ಜಿ ರಸ್ತೆ ಜಂಕ್ಷನ್‌ನಿಂದ ಓಪೆರಾ ಜಂಕ್ಷನ್ ದಿಕ್ಕಿಗೆ ಮಾತ್ರ ನಡೆಯಲು ಅವಕಾಶವಿದ್ದು, ವಿರುದ್ಧ ದಿಕ್ಕಿನಲ್ಲಿ ಸಂಚಾರಕ್ಕೆ ನಿರ್ಬಂಧವಿದೆ.
ಪಾರ್ಕಿಂಗ್ ವಿಷಯದಲ್ಲೂ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದ್ದು, ಡಿಸೆಂಬರ್ 31ರ ಸಂಜೆ 4ರಿಂದ ಜನವರಿ 1ರ ಬೆಳಗಿನ ಜಾವ 3ರವರೆಗೆ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್ (1ನೇ ಮಹಡಿ), ಯುಬಿ ಸಿಟಿ, ಗರುಡಾ ಮಾಲ್ ಹಾಗೂ ಕಾಮರಾಜ್ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ ಹೊಸ ವರ್ಷವನ್ನು ಸುರಕ್ಷಿತವಾಗಿ ಆಚರಿಸಬೇಕೆಂದು ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.

