Monday, December 29, 2025

New Year ಟ್ರಿಪ್ ಪ್ಲಾನ್ ಇದ್ಯಾ? ಈ ಪ್ಲೇಸ್ ಗಳಿಗೆ ನೋ ಎಂಟ್ರಿ! ನೋಡ್ಕೊಂಡು ಹೋಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷದ ಸಂಭ್ರಮವನ್ನು ಪ್ರವಾಸದ ಮೂಲಕ ಆಚರಿಸಲು ಹಲವರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಪ್ರವಾಸಕ್ಕೆ ಹೊರಡುವ ಮೊದಲು ಆಯ್ದ ತಾಣಗಳಲ್ಲಿ ಪ್ರವಾಸಿಗರಿಗೆ ಅವಕಾಶ ಇದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯವಶ್ಯ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಪ್ರಮುಖ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ತಾತ್ಕಾಲಿಕ ಪ್ರವೇಶ ನಿರ್ಬಂಧ ಜಾರಿ ಮಾಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ನಂದಿಗಿರಿಧಾಮಕ್ಕೆ ಡಿಸೆಂಬರ್ 31ರ ಮಧ್ಯಾಹ್ನ 2 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 10 ಗಂಟೆಯವರೆಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ. ಅತಿಥಿಗೃಹಗಳಲ್ಲಿ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಂಡವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಕುಡಿದು ಅಸಭ್ಯ ವರ್ತನೆ ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದೇ ವೇಳೆ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿ ಪ್ರವಾಸಿ ತಾಣಗಳಿಗೂ ನಿರ್ಬಂಧ ವಿಧಿಸಲಾಗಿದೆ. ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ ಪ್ರವಾಸಿಗರ ಪ್ರವೇಶ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ಪಾರ್ಟಿ ಹಾಗೂ ಹೊಸ ವರ್ಷಾಚರಣೆಗೂ ಅವಕಾಶವಿರುವುದಿಲ್ಲ.

ಇನ್ನೊಂದೆಡೆ, ಪ್ರವಾಸಿಗರಿಗೆ ಒಳ್ಳೆಯ ಸುದ್ದಿಯೂ ಇದೆ. ಹೊಸ ವರ್ಷದ ಹಿನ್ನೆಲೆ ಮಂಗಳವಾರವೂ ಬನ್ನೇರುಘಟ್ಟ ಮೃಗಾಲಯ ತೆರೆಯಲಾಗುತ್ತದೆ. ಮೃಗಾಲಯ ಮತ್ತು ಚಿಟ್ಟೆ ಪಾರ್ಕ್ ವೀಕ್ಷಣೆಗೆ ಅವಕಾಶ ಇರಲಿದ್ದು, ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕವೂ ಪಡೆಯಬಹುದು ಎಂದು ಮೃಗಾಲಯ ಆಡಳಿತ ಮಾಹಿತಿ ನೀಡಿದೆ.

error: Content is protected !!