ಹೊಸದಿಗಂತ ವರದಿ ಕಾರವಾರ :
ಕುಮಟಾ-ಶಿರಸಿ, ರಾಷ್ಟ್ರೀಯ ಹೆದ್ದಾರಿ-766 ಇ ರಸ್ತೆಯಲ್ಲಿ ನಿಷೇಧಿಸಲಾದ ಬಸ್ ಸಂಚಾರವನ್ನು , ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ , ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಹಾಗೂ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರವಾರ ರವರ ವರದಿ ಆಧಾರದ ಮೇಲೆ ಸದರಿ ರಸ್ತೆಯಲ್ಲಿ 1-1-2026 ರಿಂದ ಬಸ್ ಸಂಚಾರಕ್ಕೆ ಅನುವು ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ಸಂಚಾರ ಸಂದರ್ಭದಲ್ಲಿ ಬಸ್ ಹೊರತುಪಡಿಸಿ ಬೇರೆ ಭಾರಿ ವಾಹನಗಳು ಸದರಿ ರಸ್ತೆಯಲ್ಲಿ ಸಂಚರಿಸತಕ್ಕದ್ದಲ್ಲ. ಮತ್ತು ಕಾಮಗಾರಿ ಪ್ರಗತಿಯಲ್ಲಿರುವ ಪ್ರದೇಶದಲ್ಲಿ ವೇಗದ ಮೀತಿ 20 ಕಿ.ಮೀ ಗೆ ಸೀಮಿತವಾಗಿರಬೇಕು.
ಪೊಲೀಸ್ ಇಲಾಖೆವತಿಯಿಂದ ಅವಶ್ಯವಿರುವ ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು, ಸಂಚಾರ ದಟ್ಟಣೆ ಆಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಸ್ತೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ವೇಗದ ಮಿತಿ ಫಲಕ, ರಸ್ತೆ ತಿರುವು ಪ್ರದೇಶದಲ್ಲಿ ಅಗತ್ಯ ಸೂಚನಾ ಫಲಕಗಳು, ಇನ್ನೀತರ ಅಗತ್ಯ ಸರಕ್ಷಾ ಕ್ರಮಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

