Monday, December 29, 2025

ಗೌತಮ್‌ ಗಂಭೀರ್‌ ರಣಜಿ ಟ್ರೋಫಿ ಟೂರ್ನಿಗೆ ಕೋಚ್ ಆಗಲಿ: ಇಂಗ್ಲೆಂಡ್‌ ಮಾಜಿ ಸ್ಪಿನ್ನರ್‌ ಹಿಂಗ್ಯಾಕ್ ಹೇಳಿದರು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಭಾರತ ಕ್ರಿಕೆಟ್‌ ತಂಡ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ಇಂಗ್ಲೆಂಡ್‌ ಮಾಜಿ ಸ್ಪಿನ್ನರ್‌ ಮಾಂಟಿ ಪನೇಸರ್‌ ಟೀಕಿಸಿದ್ದಾರೆ.

ಭಾರತ ತಂಡದ ಹೆಡ್‌ ಕೋಚ್‌ ಆಗಿ ಗೌತಮ್‌ ಗಭೀರ್‌ ಅವರು ಮಿಶ್ರ ಫಲಿತಾಂಶವನ್ನು ಕಂಡಿದ್ದಾರೆ. ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿದ್ದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಇಂಗ್ಲೆಂಡ್‌ ಸ್ಪಿನ್‌ ದಂತಕತೆ ಮಾಂಟಿ ಪನೇಸರ್‌ ಅವರು, ಇವರು ರಣಜಿ ಟ್ರೋಫಿ ಟೂರ್ನಿಯ ತಂಡದಲ್ಲಿ ಮೊದಲು ಹೆಡ್‌ ಕೋಚ್‌ ಆಗಿ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸಿದ್ದಾರೆ.

ಭಾರತ ತಂಡ 2024ರಿಂದ 2025ರವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನವನ್ನು ತೋರಿದೆ. ರಾಹುಲ್‌ ದ್ರಾವಿಡ್‌ ಕೋಚ್‌ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಗೌತಮ್‌ ಗಂಭೀರ್‌ ಕೋಚ್‌ ಆಗಿ ಭಾರತ ತಂಡಕ್ಕೆ ಬಂದಿದ್ದರು. ಇವರ ಅಡಿಯಲ್ಲಿ ಭಾರತ ತಂಡ ಟೆಸ್ಟ್‌ ತವರಿನಲ್ಲಿ ಸಂಪೂರ್ಣವಾಗಿ ನೆಲ ಕಚ್ಚಿದೆ. 2024ರ ಮಧ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತ್ತು. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿಯೂ ಟೀಮ್‌ ಇಂಡಿಯಾ 2-0 ಅಂತರದಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿತ್ತು.

ಗೌತಮ್‌ ಗಂಭೀರ್‌ ಮೊದಲು ರಣಜಿ ತಂಡವೊಂದರ ಕೋಚ್‌ ಆಗಿ ಕಾರ್ಯನಿರ್ವಹಿಸಬೇಕು. ಆ ಮೂಲಕ ಇತರೆ ಕೋಚ್‌ಗಳ ಜೊತೆಗೆ ಸಂಭಾಷಣೆ ನಡೆಸುವ ಮೂಲಕ ರೇಡ್‌ ಬಾಲ್‌ ಕೋಚಿಂಗ್‌ ತಂತ್ರಗಳನ್ನು ಇನ್ನಷ್ಟು ಉತ್ತಮವಾಗಿ ಕಲಿಯಬೇಕು ಎಂದು ಪನೇಸರ್‌ ಸಲಹೆ ನೀಡಿದ್ದಾರೆ.

‘ಗೌತಮ್ ಗಂಭೀರ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಕೋಚ್, ಹಾಗಾಗಿ ಯಶಸ್ವಿಯಾಗುತ್ತಿದ್ದಾರೆ. ಆದರೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಸಕ್ಸಸ್‌ ಆಗಬೇಕೆಂದರೆ ಅವರು ರಣಜಿ ಟ್ರೋಫಿ ತಂಡವೊಂದರಲ್ಲಿ ತರಬೇತುದಾರರಾಗಬೇಕು ಮತ್ತು ಉತ್ತಮ ರೆಡ್‌ ಬಾಲ್‌ ತಂಡವನ್ನು ಕಟ್ಟುವ ಬಗ್ಗೆ ಇತರೆ ಕೋಚ್‌ಗಳ ಬಳಿ ಮಾತನಾಡಬೇಕು. ರೆಡ್-ಬಾಲ್ ಕ್ರಿಕೆಟ್‌ನಲ್ಲಿ ತಂಡವನ್ನು ಹೇಗೆ ಯಶಸ್ವಿಯಾಗಿ ಮುನ್ನಡೆಸಬೇಕೆಂಬ ಅಂಶಗಳನ್ನು ಕಲಿಯಬೇಕು’ ಎಂದು ಅವರು ತಿಳಿಸಿದ್ದಾರೆ.

ಭಾರತ ತಂಡದ ರೆಡ್-ಬಾಲ್ ಕ್ರಿಕೆಟ್ ವೈಫಲ್ಯಕ್ಕೆ ಆಟಗಾರರೇ ಕಾರಣ ಎಂದು ಮಾಜಿ ಸ್ಪಿನ್ನರ್ ದೂಷಿಸಿದರು. ಆಟಗಾರರು ರೆಡ್‌ ಬಾಲ್‌ ಕ್ರಿಕೆಟ್‌ಗೆ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂದು ದೂರಿದ್ದಾರೆ. ಯುವ ಕ್ರಿಕೆಟಿಗರು ನಾಲ್ಕು ದಿನಗಳ ಪ್ರಥಮ ದರ್ಜೆ ಪಂದ್ಯಗಳು ಅಥವಾ ಟೆಸ್ಟ್ ಪಂದ್ಯಗಳನ್ನು ಆಡುವುದಕ್ಕಿಂತ ಐಪಿಎಲ್ ಒಪ್ಪಂದಗಳನ್ನು ಪಡೆಯುವತ್ತ ಹೆಚ್ಚು ಗಮನಹರಿಸುತ್ತಾರೆ ಎಂದು ಅವರು ಆರೋಪ ಮಾಡಿದರು.

error: Content is protected !!