ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದು ತೆರೆಕಂಡ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿವೆ. ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಮತ್ತು ಮಲ್ಟಿ ಸ್ಟಾರ್ ಸಿನಿಮಾ ‘45’ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ನಿರಂತರವಾಗಿ ಕಲೆಕ್ಷನ್ ಮಾಡುತ್ತಿವೆ. ವೀಕೆಂಡ್ ನಂತರವೂ ಸೋಮವಾರ ಎರಡೂ ಚಿತ್ರಗಳು ಸ್ಥಿರ ಗಳಿಕೆ ದಾಖಲಿಸಿದ್ದು, ಇದೇ ಸಮಯದಲ್ಲಿ ‘ಡೆವಿಲ್’ ಚಿತ್ರದ ಓಟ ಮಾತ್ರ ನಿಧಾನಗೊಂಡಿದೆ.
‘ಮಾರ್ಕ್’ ಸಿನಿಮಾ ಬಿಡುಗಡೆಯ ಮೊದಲ ದಿನವೇ ದೊಡ್ಡ ಓಪನಿಂಗ್ ಪಡೆದುಕೊಂಡಿತ್ತು. ನಾಲ್ಕು ದಿನಗಳಲ್ಲಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಸೋಮವಾರವೂ ಚಿತ್ರದ ಓಟ ಮುಂದುವರಿದಿದ್ದು, ವರದಿಗಳ ಪ್ರಕಾರ ಆ ದಿನ ಸುಮಾರು 1.5 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಅಧಿಕೃತ ಅಂಕಿ-ಅಂಶಗಳು ಹಾಗೂ ಸೋಮವಾರದ ವರದಿ ಸೇರಿಸಿದರೆ ‘ಮಾರ್ಕ್’ ಒಟ್ಟಾರೆ ಕಲೆಕ್ಷನ್ ಸುಮಾರು 37 ಕೋಟಿ ರೂಪಾಯಿ ತಲುಪಿದೆ ಎಂದು ಅಂದಾಜಿಸಲಾಗಿದೆ.
ಇನ್ನೊಂದೆಡೆ ‘45’ ಸಿನಿಮಾ ಕೂಡ ಸ್ಥಿರವಾಗಿ ಹಣ ಹರಿಸುತ್ತಿದೆ. ಚಿತ್ರತಂಡ ಅಧಿಕೃತ ಸಂಖ್ಯೆಯನ್ನು ಪ್ರಕಟಿಸದಿದ್ದರೂ, ಚಿತ್ರ ಇದುವರೆಗೆ ಸುಮಾರು 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸೋಮವಾರವೂ ಕೋಟಿ ಮೊತ್ತದ ವ್ಯವಹಾರ ನಡೆದಿರುವುದು ಚಿತ್ರದ ಬಲವನ್ನು ತೋರಿಸುತ್ತದೆ.
ಆದರೆ ಈ ಎರಡೂ ಸಿನಿಮಾಗಳ ಭಾರೀ ಸ್ಪರ್ಧೆಯಲ್ಲಿ ‘ಡೆವಿಲ್’ ಹಿನ್ನಡೆ ಅನುಭವಿಸಿದೆ. ಭಾನುವಾರ 21 ಲಕ್ಷ ರೂಪಾಯಿ ಗಳಿಸಿದ್ದ ಚಿತ್ರ, ಸೋಮವಾರ ಕೇವಲ 7 ಲಕ್ಷಕ್ಕೆ ಇಳಿದಿದೆ. ‘ಡೆವಿಲ್’ ಚಿತ್ರದ ಒಟ್ಟಾರೆ ಕಲೆಕ್ಷನ್ 34 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

