Tuesday, December 30, 2025

ಇಶಾನ್ ಕಿಶನ್ ವಿರಾಮದ ಹಿಂದೆ BCCI ಪ್ಲಾನ್: ಸ್ಫೋಟಕ ಬ್ಯಾಟರ್ ಮೈದಾನದಿಂದ ಹೊರಗುಳಿದಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯ ಹಝಾರೆ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಕೇವಲ 33 ಎಸೆತಗಳಲ್ಲಿ ಶತಕ ಚಚ್ಚಿ ಅಬ್ಬರಿಸಿದ್ದ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಸದ್ಯ ಮೈದಾನದಿಂದ ದೂರ ಉಳಿದಿದ್ದಾರೆ. ಸತತ ಎರಡು ಪಂದ್ಯಗಳಿಂದ ಅವರು ಹೊರಗುಳಿಯಲು ಬಿಸಿಸಿಐ ನೀಡಿದ ವಿಶೇಷ ಸೂಚನೆಯೇ ಪ್ರಮುಖ ಕಾರಣ ಎನ್ನಲಾಗಿದೆ.

ವಿಶ್ರಾಂತಿಗೆ ಅಸಲಿ ಕಾರಣವೇನು? ಇಶಾನ್ ಕಿಶನ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಿಂದ ಅವರು ಸತತವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ಗೆ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿರುವ ಕಿಶನ್ ಅವರಿಗೆ ಯಾವುದೇ ಗಾಯದ ಸಮಸ್ಯೆ ಎದುರಾಗಬಾರದು ಎಂಬುದು ಬಿಸಿಸಿಐ ಆಯ್ಕೆ ಸಮಿತಿಯ ಉದ್ದೇಶ. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ, ಎಲ್ಲ ಪಂದ್ಯಗಳನ್ನು ಆಡದಂತೆ ಅವರಿಗೆ ಸೂಚಿಸಲಾಗಿದೆ.

ರಾಜಸ್ಥಾನ ಮತ್ತು ಪುದುಚೇರಿ ವಿರುದ್ಧದ ಪಂದ್ಯಗಳನ್ನು ತಪ್ಪಿಸಿಕೊಂಡಿರುವ ಇಶಾನ್, ಡಿಸೆಂಬರ್ 31ರಂದು ನಡೆಯಲಿರುವ ತಮಿಳುನಾಡು ವಿರುದ್ಧದ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.

ಕರ್ನಾಟಕ ವಿರುದ್ಧದ ಪಂದ್ಯದ ಬಳಿಕ ನೇರವಾಗಿ ಮನೆಗೆ ತೆರಳಿರುವ ಅವರು, ಜನವರಿ 3 ರಂದು ನಡೆಯಲಿರುವ ಕೇರಳ ವಿರುದ್ಧದ ಪಂದ್ಯದ ವೇಳೆ ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ವರದಿಗಳ ಪ್ರಕಾರ, ರಿಷಭ್ ಪಂತ್ ಬದಲಿಗೆ ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ ಅವರನ್ನು ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲು ಮಂಡಳಿ ಒಲವು ತೋರಿದೆ. ಈಗಾಗಲೇ ಟಿ20 ಸರಣಿಗೆ ಸ್ಥಾನ ಖಚಿತಪಡಿಸಿಕೊಂಡಿರುವ ಕಿಶನ್, ಕಿವೀಸ್ ಪಡೆಯ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ದೊಡ್ಡ ಸವಾಲುಗಳಿಗಾಗಿ ಸಜ್ಜಾಗಲೆಂದೇ ಇಶಾನ್‌ಗೆ ಈಗಿನಿಂದಲೇ ವಿಶ್ರಾಂತಿ ನೀಡಲಾಗುತ್ತಿದೆ.

error: Content is protected !!