ಧನುರ್ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ‘ವೈಕುಂಠ ಏಕಾದಶಿ’ ಎಂದು ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ದಿನಕ್ಕೆ ವಿಶೇಷ ಪ್ರಾಮುಖ್ಯತೆಯಿದ್ದು, ಇದನ್ನು ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯಲಾಗುತ್ತದೆ. ಈ ಹೆಸರಿನ ಹಿಂದೆ ಪುರಾಣಗಳ ಸ್ವಾರಸ್ಯಕರ ಹಿನ್ನೆಲೆಯಿದೆ.
ಪುರಾಣಗಳ ಪ್ರಕಾರ, ಈ ಪವಿತ್ರ ದಿನದಂದು ವೈಕುಂಠದ ದ್ವಾರಗಳು ತೆರೆಯುತ್ತವೆ. ಈ ಸಂದರ್ಭದಲ್ಲಿ ಹರಿಯ ದರ್ಶನ ಪಡೆಯಲು ಸ್ವರ್ಗಲೋಕದ ಮೂರು ಕೋಟಿ ದೇವತೆಗಳು ವೈಕುಂಠಕ್ಕೆ ಆಗಮಿಸುತ್ತಾರೆ ಎಂಬ ನಂಬಿಕೆಯಿದೆ. ಈ ದಿನ ದೇವಸ್ಥಾನಗಳಲ್ಲಿ ‘ವೈಕುಂಠ ದ್ವಾರ’ದ ಮೂಲಕ ಹರಿಯನ್ನು ದರ್ಶಿಸಿದರೆ, ಎಲ್ಲಾ ದೇವತೆಗಳನ್ನು ದರ್ಶಿಸಿದ ಪುಣ್ಯ ಲಭಿಸುತ್ತದೆ ಎಂಬ ಕಾರಣಕ್ಕೆ ಇದನ್ನು ಮುಕ್ಕೋಟಿ ಏಕಾದಶಿ ಎನ್ನಲಾಗುತ್ತದೆ.
ವರ್ಷವಿಡೀ ಬರುವ 24 ಏಕಾದಶಿಗಳನ್ನು ಆಚರಿಸಲು ಸಾಧ್ಯವಾಗದವರು, ಕೇವಲ ಈ ಒಂದು ವೈಕುಂಠ ಏಕಾದಶಿಯನ್ನು ಶ್ರದ್ಧೆಯಿಂದ ಆಚರಿಸಿದರೆ, ಅದು ಮೂರು ಕೋಟಿ ಏಕಾದಶಿಗಳ ವ್ರತ ಮಾಡಿದಷ್ಟು ಫಲ ನೀಡುತ್ತದೆ ಎಂಬುದು ಭಕ್ತರ ಗಾಢ ನಂಬಿಕೆ.
ಶ್ರೀಮನ್ನಾರಾಯಣನು ತನ್ನೊಳಗಿಂದ ‘ಏಕಾದಶಿ’ ಎಂಬ ಶಕ್ತಿಯನ್ನು ಸೃಷ್ಟಿಸಿ, ದೇವತೆಗಳಿಗೆ ತೊಂದರೆ ನೀಡುತ್ತಿದ್ದ ‘ಮುರ’ ಎಂಬ ಅಸುರನನ್ನು ಸಂಹರಿಸಿದ ದಿನವಿದು. ಈ ವಿಜಯದ ಸಂಭ್ರಮದಲ್ಲಿ ದೇವತೆಗಳೆಲ್ಲರೂ ಪಾಲ್ಗೊಂಡಿದ್ದರಿಂದ ಈ ದಿನಕ್ಕೆ ವಿಶೇಷ ಮಹತ್ವ ಬಂದಿದೆ.
ವೈಕುಂಠ ದ್ವಾರದ ವಿಶೇಷತೆ
ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷವಾಗಿ ‘ವೈಕುಂಠ ದ್ವಾರ’ ಅಥವಾ ಉತ್ತರ ದ್ವಾರವನ್ನು ನಿರ್ಮಿಸಲಾಗುತ್ತದೆ. ಈ ದ್ವಾರದ ಮೂಲಕ ಸಾಗಿ ದೇವರ ದರ್ಶನ ಪಡೆದರೆ ಜನ್ಮ-ಮರಣಗಳ ಸುಳಿಯಿಂದ ಮುಕ್ತಿ ಸಿಗುತ್ತದೆ ಮತ್ತು ಮರಣಾನಂತರ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನಜನಿತವಾಗಿದೆ.
ಭಕ್ತರು ಈ ದಿನ ಪೂರ್ತಿ ಉಪವಾಸವಿದ್ದು, ಜಾಗರಣೆ ಮಾಡುತ್ತಾರೆ. ‘ಓಂ ನಮೋ ನಾರಾಯಣಾಯ’ ಮಂತ್ರದ ಪಠಣದೊಂದಿಗೆ ತುಳಸಿ ಅರ್ಚನೆ ಮತ್ತು ವಿಷ್ಣು ಸಹಸ್ರನಾಮ ಪಠಿಸುವುದು ಈ ದಿನದ ವಿಶೇಷ.

