ಹೊಸದಿಗಂತ ಬೆಳಗಾವಿ:
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ವಿವಾದಾತ್ಮಕ ನಿರ್ಧಾರಗಳ ವಿರುದ್ಧ ಭಾರತೀಯ ಜನತಾ ಪಾರ್ಟಿ ನಿರ್ಣಾಯಕ ಹೋರಾಟಕ್ಕೆ ಮುಂದಾಗಿದೆ. ಜನವರಿ 5ರಂದು ನಡೆಯಲಿರುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಹೋರಾಟದ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಿಸಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಕೇರಳದ ಅಕ್ರಮ ವಲಸಿಗರಿಗೆ ಯಾವುದೇ ನಿಯಮ ಪಾಲಿಸದೆ ಮನೆಗಳನ್ನು ನೀಡುತ್ತಿರುವುದು ಕಾನೂನುಬಾಹಿರ. ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್ ಸೂಚನೆಯಂತೆ ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದ್ದಾರೆ. ಇದು ಕನ್ನಡಿಗರ ಆತ್ಮಗೌರವಕ್ಕೆ ತಂದ ಚ್ಯುತಿ,” ಎಂದು ಅವರು ಕಿಡಿಕಾರಿದರು.
ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿ ಮಿತಿ ಮೀರಿದೆ ಎಂದು ಆರೋಪಿಸಿದ ವಿಜಯೇಂದ್ರ, “ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಮಹಾರಾಷ್ಟ್ರ ಪೊಲೀಸರು ಬಂದು ಡ್ರಗ್ಸ್ ಸೀಜ್ ಮಾಡುತ್ತಿದ್ದಾರೆ ಎಂದರೆ ನಮ್ಮ ರಾಜ್ಯದ ಪೊಲೀಸರು ಮತ್ತು ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಗೃಹ ಸಚಿವರು ಅಸಮರ್ಥರಾಗಿದ್ದು, ಇಲಾಖೆಯ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ,” ಎಂದು ಪ್ರಶ್ನಿಸಿದರು.
“ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರವು ಎಲ್ಲೆಡೆ ಮದ್ಯದ ಅಂಗಡಿಗಳನ್ನು ತೆರೆಯುತ್ತಿದೆ. ರಾಜ್ಯದ ಖಜಾನೆ ತುಂಬಿಸಲು ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಾ, ಕರ್ನಾಟಕವನ್ನು ‘ಕುಡುಕರ ರಾಜ್ಯ’ವನ್ನಾಗಿ ಮಾಡಲು ಹೊರಟಿದೆ,” ಎಂದು ಅವರು ಟೀಕಿಸಿದರು.
ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಮುಖ್ಯಮಂತ್ರಿಗಳು ಕೇವಲ ಪ್ರಧಾನಿಗೆ ಪತ್ರ ಬರೆಯುವುದನ್ನೇ ಸಾಧನೆ ಎಂದುಕೊಂಡಿದ್ದಾರೆ. ಅಲ್ಲದೆ, ‘ಗೃಹಲಕ್ಷ್ಮಿ’ ಯೋಜನೆಯ ಬಾಕಿ ಹಣವನ್ನು ತಕ್ಷಣವೇ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಭಯ ಪಾಟೀಲ, ನಿಖಿಲ ಕತ್ತಿ, ಮುಖಂಡರಾದ ಎಂ.ಬಿ. ಝರಲಿ, ಸುಭಾಷ ಪಾಟೀಲ, ಅನಿಲ ಬೆನಕೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

